ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರನ್ ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಅರ್ಧಶತಕ ಸಿಡಿಸಿ ಐಪಿಎಲ್ ನಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿದ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಮೊಹಾಲಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 54 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೊಂದಿಗೆ 73 ರನ್ ಬಾರಿಸಿ ಅಜೇಯರಾಗಿ ಉಳಿದರು. ಇದು ಕೊಹ್ಲಿಗೆ ಇದು ಪ್ರಸಕ್ತ ಐಪಿಎಲ್ ನಲ್ಲಿ 4ನೇ ಅರ್ಧಶತಕವಾಗಿದ್ದು, ಒಟ್ಟಾರೆ ಐಪಿಎಲ್ ನಲ್ಲಿ 67ನೇ ಅರ್ಧಶತಕವಾಗಿದೆ.
ಕೊಹ್ಲಿ 67ನೇ ಶತಕ ಸಿಡಿಸುವ ಮೂಲಕ ಐಪಿಎಲ್ ನಲ್ಲಿ ಅತೀ ಹೆಚ್ಚು ಅರ್ಧಶತಕ ಸಿಡಿಸಿದ್ದ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ದಾಖಲೆಯನ್ನು ಮುರಿದಿದ್ದಾರೆ. ಡೇವಿಡ್ ವಾರ್ನರ್ 66 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಕೊಹ್ಲಿ 260 ಪಂದ್ಯಗಳಲ್ಲಿ 67 ಬಾರಿ 50ಕ್ಕಿಂತ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದರೆ, ವಾರ್ನರ್ 184 ಪಂದ್ಯಗಳಲ್ಲಿ 66 ಬಾರಿ ಈ ಸಾಧನೆ ಮಾಡಿದ್ದಾರೆ. ಶಿಖರ್ ಧವನ್ 222 ಪಂದ್ಯಗಳಲ್ಲಿ 53 ಬಾರಿ ಅರ್ಧಶತಕಕ್ಕಿಂತ ಅಧಿಕ ರನ್ ಗಳಿಸಿದ್ದಾರೆ.
ರೋಹಿತ್ ಶರ್ಮ 264 ಪಂದ್ಯಗಳಲ್ಲಿ 46 ಬಾರಿ ಅರ್ಧಶತಕ ಬಾರಿಸಿ ಅತೀ ಹೆಚ್ಚು ಅರ್ಧಶತಕ ಗಳಿಸಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ಎಬಿಡಿ ಡಿವಿಲಿಯರ್ಸ್ (184 ಪಂದ್ಯ) ಮತ್ತು ಕೆಎಲ್ ರಾಹುಲ್ (138 ಪಂದ್ಯ) ತಲಾ 43 ಅರ್ಧಶತಕ ಬಾರಿಸಿ 5ನೇ ಸ್ಥಾನ ಹಂಚಿಕೊಂಡಿದ್ದಾರೆ.


