ದಾಖಲೆಗಳ ಸರದಾರ ಹಾಗೂ ರನ್ ಮೆಷಿನ್ ವಿರಾಟ್ ಕೊಹ್ಲಿ ನಿರೀಕ್ಷೆಯಂತೆ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
ಭಾರತ ಕ್ರಿಕೆಟ್ ದಂತಕತೆಗಳಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ ನಿವೃತ್ತಿಯ ಬಗ್ಗೆ ಕೆಲವು ದಿನಗಳಿಂದ ವದಂತಿ ಹರಡುತ್ತಿದ್ದು, ಸೋಮವಾರ ಬೆಳಿಗ್ಗೆ ಇನ್ ಸ್ಟಾಗ್ರಾಂನಲ್ಲಿ ಭಾವಾನಾತ್ಮಕ ಪೋಸ್ಟ್ ಮೂಲಕ ಟೆಸ್ಟ್ ಬದುಕಿಗೆ ವಿದಾಯ ಹೇಳಿದ್ದಾರೆ.
ರೋಹಿತ್ ಶರ್ಮ ಟೆಸ್ಟ್ ಕ್ರಿಕೆಟ್ ಗೆ ದಿಢೀರನೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸುವ ಇಂಗಿತ ವ್ಯಕ್ತಪಡಿಸಿ ಬಿಸಿಸಿಐಗೆ ಪತ್ರ ಬರೆದಿದ್ದಾರೆ ಎಂದು ಹೇಳಲಾಗಿತ್ತು. ಅಲ್ಲದೇ ಬಿಸಿಸಿಐ ತಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡಿತ್ತು ಎಂದು ಹೇಳಲಾಗಿದೆ.
ಆದರೆ ಬಿಸಿಸಿಐ ಮನವಿಯನ್ನು ಪರಿಗಣಸದ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದು, ಏಕದಿನ ಕ್ರಿಕೆಟ್ ನಲ್ಲಿ ಮುಂದುವರಿಯುವ ಸುಳಿವು ನೀಡಿದ್ದಾರೆ.
ಇದೊಂದು ಕಠಿಣ ನಿರ್ಧಾರವಾಗಿತ್ತು. ಆದರೆ ನನ್ನ ನಿರ್ಧಾರ ಸರಿಯಾಗಿ ಇದೆ ಎಂಬ ನಂಬಿಕೆ ಇದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಕಳೆದ 14 ವರ್ಷಗಳಿಂದ ಭಾರತದ ಜೆರ್ಸಿ ಧರಿಸಿ ಆಡುತ್ತಿದ್ದ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳುತ್ತಿದ್ದೇನೆ. ಪ್ರಮಾಣಿಕವಾಗಿ ಹೇಳುತ್ತಿದ್ದೇನೆ. ಈ ಟೆಸ್ಟ್ ಕ್ರಿಕೆಟ್ ನನ್ನನ್ನು ಪರೀಕ್ಷೆಗೊಳಪಡಿಸಿತು, ರೂಪಿಸಿತು. ಜೀವನಕ್ಕೆ ಆಗುವಷ್ಟು ಪಾಠಕ ಕಲಿಸಿಕೊಟ್ಟಿತು. ಅದನ್ನು ಜೀವನ ಪರ್ಯಾಂತ ಅಳವಡಿಸಿಕೊಂಡಿದ್ದೇನೆ. ವೈಯಕ್ತಿಕವಾಗಿ ನಾನು ಟೆಸ್ಟ್ ಕ್ರಿಕೆಟ್ ನಲ್ಲಿ ಖುಷಿ ಕೊಟ್ಟಿದೆ. ಈ ನಿರ್ಧಾರ ಕಠಿಣವಾಗಿತ್ತು. ಆದರೆ ಸರಿಯಾಗಿದೆ ಎಂಬುದು ನನ್ನ ಅನಿಸಿಕೆ. ನನ್ನ ಬಳಿ ಇದ್ದಿದ್ದೆಲ್ಲ ಅದಕ್ಕೆ ಧಾರೆ ಎರೆದಿದ್ದೇನೆ ಎಂದು ವಿರಾಟ್ ಕೊಹ್ಲಿ ಸುದೀರ್ಘ ಪತ್ರವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ 123 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 46.85ರ ಸರಾಸರಿಯಲ್ಲಿ 9,230 ರನ್ ಗಳಿಸಿದ್ದಾರೆ. ಇದರಲ್ಲಿ 30 ಶತಕ ಹಾಗೂ 31 ಅರ್ಧಶತಕ ಸೇರಿವೆ. 254 ರನ್ ವೈಯಕ್ತಿಕ ಗರಿಷ್ಠ ಸಾಧನೆಯಾಗಿದೆ.
ಸ್ವದೇಶವಾಗಲಿ ವಿದೇಶವಾಗಲಿ ಯಾವುದೇ ಪಿಚ್ ಆಗಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಿಂದ ದರ್ಬಾರು ನಡೆಸಿದ್ದರು. ಇಂತಹ ಕೊಹ್ಲಿ ಇನ್ನೆರಡು ವರ್ಷ ಆಡಿದ್ದರೂ ಟೆಸ್ಟ್ ಕ್ರಿಕೆಟ್ ನಲ್ಲಿ 10,000 ರನ್ ಪೂರೈಸುವ ದಾಖಲೆ ಬರೆಯುತ್ತಿದ್ದರು. ಏಕೆಂದರೆ ಅವರಿನ್ನೂ ಭರ್ಜರಿ ಫಾರ್ಮ್ ನಲ್ಲಿದ್ದಾರೆ.


