ಭಾರತ ತಂಡದ ಮಾಜಿ ಫೀಲ್ಡಿಂಗ್ ಕೋಚ್ ರಾಮಕೃಷ್ಣನ್ ಶ್ರೀಧರ್ ಆಫ್ಘಾನಿಸ್ತಾನ ಕ್ರಿಕೆಟ್ ತಂಡದ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಭಾರತ ಕ್ರಿಕೆಟ್ ತಂಡದಲ್ಲಿ 2014ರಿಂದ ಸತತ 7 ವರ್ಷಗಳ ಕಾಲ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಆರ್.ಶ್ರೀಧರ್ ಅವರನ್ನು ಮುಂಬರುವ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಸಹಾಯಕ ಕೋಚ್ ಆಗಿ ನೇಮಿಸಲಾಗಿದೆ.
ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಬುಧವಾರ ಈ ವಿಷಯ ಪ್ರಕಟಿಸಿದ್ದು, ಆರ್.ಶ್ರೀಧರ್ ದೀರ್ಘಕಾಲದವರೆಗೆ ತಂಡದಲ್ಲಿ ಮುಂದುವರಿಯಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದೆ.
ನ್ಯೂಜಿಲೆಂಡ್ ವಿರುದ್ಧ ಆಫ್ಘಾನಿಸ್ತಾನ ಒಂದು ಟೆಸ್ಟ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.
ಹೈದರಾಬಾದ್ ಮೂಲದ ಆರ್.ಶ್ರೀಧರ್ 35 ಪ್ರಥಮ ದರ್ಜೆ ಮತ್ತು 15 ಎ ದರ್ಜೆಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದು, ಭಾರತ ತಂಡದ ಸಹಾಯಕ ಕೋಚ್ ಆಗಿ 300ಕ್ಕೂ ಹೆಚ್ಚು ಪಂದ್ಯಗಳಲ್ಲಿ ಸಹಾಯಕ ಕೋಚ್ ಕಾರ್ಯ ನಿರ್ವಹಿಸಿದ್ದಾರೆ. 2015 ಮತ್ತು 2019ರ ಏಕದಿನ ವಿಶ್ವಕಪ್ ಮತ್ತು 2016 ಮತ್ತು 2021ರ ಟಿ-20 ವಿಶ್ವಕಪ್ ಗಳಲ್ಲಿ ಭಾರತ ತಂಡದ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ.