ಹೈಕಮಾಂಡ್ ಸೂಚನೆ ಮೇರೆಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹಾಗೂ ಮಾಜಿ ಸಚಿವ ಕೆ. ಸುಧಾಕರ್ ಜೊತೆಗೆ ಶಾಸಕ ಎಸ್.ಆರ್. ವಿಶ್ವನಾಥ್ ರಾಜೀ ಸಂಧಾನಕ್ಕೆ ಒಪ್ಪಿಗೆ ಸೂಚಿಸಿದ್ದು, ವೈಯಕ್ತಿಕ ಮುನಿಸು ಮರೆತು ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ ತಂದುಕೊಡುವುದಾಗಿ ವಿಶ್ವನಾಥ್ ಭರವಸೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಬಿಜೆಪಿಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಈ ವೇಳೆ ಸುಧಾಕರ್ ಕೂಡ ಭಾಗಿಯಾಗಿದ್ದು ಇಬ್ಬರ ನಡುವಿನ ಮನಸ್ತಾಪಕ್ಕೆ ತೆರೆ ಎಳೆದಿದ್ದಾರೆ.
ಗೃಹ ಸಚಿವ ಅಮಿತ್ ಶಾ ಸೂಚನೆ ಮೇರೆಗೆ ಬೆಳಗ್ಗೆ ಉಪಹಾರಕ್ಕೆ ಬರುವಂತೆ ಇಬ್ಬರು ನಾಯಕರಿಗೆ ಎಸ್ಆರ್ ವಿಶ್ವನಾಥ್ ಆಹ್ವಾನ ನೀಡಿದ್ದರು. ಆಹ್ವಾನದ ಹಿನ್ನೆಲೆಯಲ್ಲಿ ಸಿಂಗನಾಯಕನಹಳ್ಳಿಯಲ್ಲಿರುವ ವಿಶ್ವನಾಥ್ ನಿವಾಸಕ್ಕೆ ಇಬ್ಬರು ನಾಯಕರು ಭೇಟಿ ನೀಡಿ ಭಿನ್ನಾಭಿಪ್ರಾಯ ಮರೆತು ಮಾತುಕತೆ ನಡೆಸಿದರು.
ಸಿಂಗನಾಯಕನಹಳ್ಳಿಯಲ್ಲಿರುವ ವಿಶ್ವನಾಥ್ ನಿವಾಸಕ್ಕೆ ಇಬ್ಬರು ನಾಯಕರು ಭೇಟಿ ನೀಡಿ ಭಿನ್ನಾಭಿಪ್ರಾಯ ಮರೆತು ಮಾತುಕತೆ ನಡೆಸಿದರು.
ಗೃಹ ಸಚಿವ ಅಮಿತ್ ಶಾ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮಾತನಾಡಿದ್ದೇನೆ. ನಾನು ಏನು ಹೇಳಬೇಕೋ ಹೇಳಿದ್ದೇನೆ. 8 ವಿಧಾನ ಸಭಾ ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ರಾಧಾ ಮೋಹನ್ ದಾಸ್ ಅವರು ನಿನ್ನೆ ತಿಂಡಿಗೆ ಬರುತ್ತೇವೆ ಎಂದು ಹೇಳಿದರು. ಇವತ್ತು ಮನೆಗೆ ಬಂದಿದ್ದು ನಮ್ಮ ಕ್ಷೇತ್ರದ ಮುಖಂಡರ ಪರಿಚಯ ಮಾಡಿಸಿದ್ದೇನೆ ಎಂದರು.
ಯಾರೇ ಹೇಳಲಿ ಬಿಡಲಿ ನಮ್ಮ ಕ್ಷೇತ್ರದಲ್ಲಿ ಸುಧಾಕರ್ ಗೆ ಬಹುಮತ ಕೊಡುತ್ತೇವೆ. ಎಲ್ಲಾ ಕಾರ್ಯಕರ್ತರನ್ನು ಕರೆದು ಸಭೆ ಮಾಡಿ ಸೂಚನೆ ಕೊಡಲಾಗುತ್ತದೆ. ನಾಮಪತ್ರ ಸಲ್ಲಿಕೆಗೆ ನಾಳೆ ಹೋಗುತ್ತೇವೆ. ಮುಂದಿನ ಬಾರಿ ಅಲೋಕ್ ಗೆ ಅವಕಾಶ ಕೊಡುತ್ತೇವೆ ಎಂದು ರಾಧಾ ಮೋಹನ್ ಜಿ ಕೂಡಾ ಹೇಳಿದ್ದಾರೆ ಎಂದು ತಿಳಿಸಿದರು.