ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ್ದ ಸಂಸದೆ ಸುಮಲತಾ ಅಂಬರೀಷ್ ನಾಳೆ ಬೆಳಿಗ್ಗೆ ಮಂಡ್ಯದಲ್ಲಿ ತನ್ನ ನಿರ್ಧಾರವನ್ನು ಪ್ರಕಟಿಸುವುದಾಗಿ ಘೋಷಿಸಿದ್ದಾರೆ.
ಮಂಗಳವಾರ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸುಮಲತಾ ಅಂಬರೀಷ್, ಬುಧವಾರ ಬೆಳಿಗ್ಗೆ ಕಾಳಿಕಾಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮಂಡ್ಯ ಜನರ ಸಮ್ಮುಖದಲ್ಲಿ ನನ್ನ ಅಭಿಪ್ರಾಯ ಪ್ರಕಟಿಸುತ್ತೇನೆ ಎಂದು ಹೇಳಿದ್ದಾರೆ.
ನಟ ದರ್ಶನ್, ಅಭಿಷೇಕ್ ಅಂಬರೀಷ್ ನನ್ನ ಜೊತೆಯಲ್ಲಿ ಇರಲಿದ್ದಾರೆ. ನನ್ನ ಮತದಾರರ ಮನಸ್ಸನ್ನು ನೋಯಿಸಲು ಬಯಸದ ಕಾರಣ ನಾನು ನನ್ನ ಹಾಗೂ ಮಂಡ್ಯ ಜನರ ನಿರ್ಧಾರವನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿ ಸುಮಲತಾ ಅಂಬರೀಷ್ ಆಸಕ್ತಿ ತೋರಿದ್ದರು. ಆದರೆ ಬಿಜೆಪಿ- ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೂ ಅಲ್ಲದೇ ಮಂಡ್ಯವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಸುಮಲತಾ ಸ್ಥಿತಿ ಅತಂತ್ರವಾಗಿತ್ತು. ಬಿಜೆಪಿ ಪರ ನಿಲುವು ತಳೆದಿದ್ದರಿಂದ ಕಾಂಗ್ರೆಸ್ ಬಾಗಿಲನ್ನು ಮುಚ್ಚಿಕೊಂಡಿದ್ದರು.
ಮಂಡ್ಯ ಬಿಟ್ಟು ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಸಲಹೆ ನೀಡಿದ್ದರೂ ಒಪ್ಪದ ಸುಮಲತಾ ಮಂಡ್ಯ ಬಿಟ್ಟು ಬೇರೆ ಕಡೆ ಸ್ಪರ್ಧಿಸದೇ ಇರಲು ನಿರ್ಧರಿಸಿದ್ದರು. ಇದೀಗ ಅವರು ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಮತ್ತೊಮ್ಮೆ ಕಣಕ್ಕಿಳಿಯುತ್ತಾರೆ ಎಂದು ಹೇಳಲಾಗಿದೆ.