ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಹೊತ್ತ ಬಾಹ್ಯಕಾಶ ನೌಕೆ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಈ ಮೂಲಕ ಮಹಿಳೆ ನೇತೃತ್ವದಲ್ಲಿ ಬಾಹ್ಯಕಾಶ ನೌಕೆ ಪರೀಕ್ಷೆ ಯಶಸ್ವಿಯಾದ ದಾಖಲೆಗೆ ಸುನೀತಾ ವಿಲಿಯಮ್ಸ್ ಪಾತ್ರರಾಗಿದ್ದಾರೆ.
ಅಮೆರಿಕದ ಫ್ಲೋರಿಡಾದಿಂದ ಸ್ಥಳೀಯ ಕಾಲಮಾನ ಪ್ರಕಾರ ಬುಧವಾರ ರಾತ್ರಿ 8.22ರ ಸುಮಾರಿಗೆ ಬೋಯಿಂಗ್ ಸ್ಟಾರ್ ಲೈನರ್ ಬಾಹ್ಯಕಾಶ ನೌಕೆ ಯಶಸ್ವಿಯಾಗಿ ಬಾಹ್ಯಕಾಶಕ್ಕೆ ಚಿಮ್ಮಿದೆ.
ಕಳೆದ ಒಂದು ದಶಕದಿಂದ ಬೋಯಿಂಗ್ ಸ್ಟಾರ್ ಲೈನರ್ ಬಾಹ್ಯಕಾಶ ನೌಕೆ ನಿರ್ಮಾಣದಲ್ಲಿ ಸುನೀತಾ ವಿಲಿಯಮ್ಸ್ ಪ್ರಮುಖ ಪಾತ್ರ ವಹಿಸಿದ್ದರು. ಈ ಮೂಲಕ ಸುನೀತಾ ಮೂರನೇ ಬಾರಿ ಗಗನಯಾತ್ರೆ ನಡೆಸಿದ ಏಕೈಕ ಮಹಿಳೆ ಎಂಬ ಮತ್ತೊಂದು ಗೌರವಕ್ಕೆ ಪಾತ್ರರಾಗಿದ್ದಾರೆ.
ಕೆಲವು ದಿನಗಳ ಹಿಂದೆ ಉಡಾವಣೆ ಆಗಬೇಕಿದ್ದ ನೌಕೆ ತಾಂತ್ರಿಕ ದೋಷದಿಂದ ಉಡಾವಣೆಗೆ ಕೇವಲ 3 ನಿಮಿಷ ಬಾಕಿ ಇರುವಾಗ ಸ್ಥಗಿತಗೊಳಿಸಲಾಗಿತ್ತು. ಬಾಹ್ಯಕಾಶ ನೌಕೆ 5 ಅಟ್ಲಾಸ್ ರಾಕೆಟ್ ಗಳನ್ನು ಹೊಂದಿದೆ.