ಕೋಲ್ಕತಾ ನೈಟ್ ರೈಡರ್ಸ್ ಮಾರಕ ದಾಳಿಗೆ ತತ್ತರಿಸಿದ ಸನ್ ರೈಸರ್ಸ್ ಹೈದರಾಬಾದ್ ತಂಡ 113 ರನ್ ಗೆ ಆಲೌಟಾಗಿದೆ. ಈ ಮೂಲಕ ಐಪಿಎಲ್ ಫೈನಲ್ ನಲ್ಲಿ ಅತೀ ಕಳಪೆ ಮೊತ್ತಕ್ಕೆ ಆಲೌಟಾದ ದಾಖಲೆಗೆ ಪಾತ್ರವಾಗಿದೆ.
ಚೆನ್ನೈ ನಲ್ಲಿ ಭಾನುವಾರ ನಡೆದ ಫೈನಲ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುವ ನಿರ್ಧರಿಸಿದ ಸನ್ ರೈಸರ್ಸ್ ಹೈದರಾಬಾದ್ 18.3 ಓವರ್ ಗಳಲ್ಲಿ 113 ರನ್ ಗೆ ಆಲೌಟಾಗಿದೆ.
ಟೂರ್ನಿಯುದ್ದಕ್ಕೂ ರನ್ ಹೊಳೆ ಹರಿಸಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಬ್ಯಾಟಿಂಗ್ ಮೇಲೆ ಭರವಸೆ ಇಟ್ಟು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತು. ಆದರೆ ಕೆಕೆಆರ್ ಬೌಲರ್ ಗಳ ಶಿಸ್ತಿನ ದಾಳಿಗೆ ತತ್ತರಿಸಿ ರನ್ ಗಳಿಸಲು ಪರದಾಡಿತು.
ಐಪಿಎಲ್ ಇತಿಹಾಸದಲ್ಲೇ ಫೈನಲ್ ನಲ್ಲಿ ಅತೀ ಕಡಿಮೆ ಮೊತ್ತ ದಾಖಲಿಸಿದ ಹಾಗೂ ಆಲೌಟ್ ಆದ ತಂಡ ಎಂಬ ಕುಖ್ಯಾತಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡ ಪಾತ್ರವಾಯಿತು.
ಕೆಕೆಆರ್ ಬೌಲಿಂಗ್ ಎಷ್ಟು ಶಿಸ್ತಿನಿಂದ ಕೂಡಿತ್ತು ಅಂದರೆ 9ನೇ ಕ್ರಮಾಂಕದಲ್ಲಿ ಬಂದ ನಾಯಕ ಪ್ಯಾಟ್ ಕಮಿನ್ಸ್ ತಂಡದ ಪರ ವೈಯಕ್ತಿಕ ಗರಿಷ್ಠ ರನ್ ಗಳಿಸಿದರು. ಪ್ಯಾಟ್ ಕಮಿನ್ಸ್ ಕೊನೆಯವರಾಗಿ ಔಟಾಗುವ ಮುನ್ನ 19 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 24 ರನ್ ಗಳಿಸಿದರು.
ಏಡಿಯನ್ ಮರ್ಕರಂ (20), ಹೆನ್ರಿಕ್ ಕ್ಲಾಸೆನ್ (16) ಮತ್ತು ನಿತಿಶ್ ಕುಮಾರ್ ರೆಡ್ಡಿ (13) ಮಾತ್ರ ಎರಡಂಕಿಯ ಮೊತ್ತ ದಾಟಿದರು.
ಕೆಕೆಆರ್ ಪರ ಆಂಡ್ರೆ ರಸೆಲ್ 3, ಹರ್ಷಿತ್ ರಾಣಾ ಮತ್ತು ಮಿಚೆಲ್ ಸ್ಟಾರ್ಕ್ ತಲಾ 2, ವೈಭವ್ ಅರೋರ, ಸುನೀಲ್ ನರೇನ್ ಮತ್ತು ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಪಡೆದು ಗಮನ ಸೆಳೆದರು.