ಸಂಘಟಿತ ಪ್ರದರ್ಶನ ನೀಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡ 8 ವಿಕೆಟ್ ಗಳ ಭಾರೀ ಅಂತರದಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಬಗ್ಗುಬಡಿದು ಐಪಿಎಲ್ ಟಿ-20 ಟೂರ್ನಿಯಲ್ಲಿ 4ನೇ ಬಾರಿ ಫೈನಲ್ ಗೆ ಲಗ್ಗೆ ಹಾಕಿದೆ.
ಅಹಮದಾಬಾದ್ ನಲ್ಲಿ ಮಂಗಳವಾರ ನಡೆದ ಕ್ವಾಲಿಫೈಯರ್-1 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 19.3 ಓವರ್ ಗಳಲ್ಲಿ 159 ರನ್ ಗೆ ಆಲೌಟ್ ಮಾಡಿದ ಕೆಕೆಆರ್ 13.4 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಈ ಗೆಲುವಿನೊಂದಿಗೆ 2 ಬಾರಿಯ ಚಾಂಪಿಯನ್ ಕೆಕೆಆರ್ 4ನೇ ಬಾರಿ ಫೈನಲ್ ಪ್ರವೇಶಿಸಿದರೆ, ಸನ್ ರೈಸರ್ಸ್ ಹೈದರಾಬಾದ್ ನಾಳೆ ನಡೆಯಲಿರುವ ಆರ್ ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಣ ಪಂದ್ಯದ ವಿಜೇತರನ್ನು ಕ್ವಾಲಿಫೈಯರ್-2 ಪಂದ್ಯದಲ್ಲಿ ಎದುರಿಸಲಿದ್ದು, ಈ ಪಂದ್ಯದ ವಿಜೇತರು ಫೈನಲ್ ಪ್ರವೇಶಿಸಲಿದ್ದಾರೆ.
ಸುಲಭ ಗುರಿ ಬೆಂಬತ್ತಿದ ಕೆಕೆಆರ್ ಪರ ನಾಯಕ ಶ್ರೇಯಸ್ ಅಯ್ಯರ್ (58 ರನ್, 24 ಎಸೆತ, 5 ಬೌಂಡರಿ, 4 ಸಿಕ್ಸರ್) ಮತ್ತು ವೆಂಕಟೇಶ್ ಅಯ್ಯರ್ (51 ರನ್, 28 ಎಸೆತ, 5 ಬೌಂಡರಿ, 4 ಸಿಕ್ಸರ್) ಮೂರನೇ ವಿಕೆಟ್ ಗೆ 97 ರನ್ ಜೊತೆಯಾಟದಿಂದ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.
ಇದಕ್ಕೂ ಮುನ್ನ ಗುರ್ಬಾಜ್ (23) ಮತ್ತು ಸುನೀಲ್ ನರೇನ್ (21) ಮೊದಲ ವಿಕೆಟ್ ಗೆ 44 ರನ್ ಜೊತೆಯಾಟದಿಂದ ಉತ್ತಮ ಆರಂಭ ನೀಡಿದರು. ಸನ್ ರೈಸರ್ಸ್ ಹೈದರಾಬಾದ್ ಕಳಪೆ ಬ್ಯಾಟಿಂಗ್, ಬೌಲಿಂಗ್ ಜೊತೆ ಹಲವಾರು ಕ್ಯಾಚ್ ಕೈ ಬಿಟ್ಟು ಕಳಪೆ ಪ್ರದರ್ಶನ ನೀಡಿ ಫೈನಲ್ ಪ್ರವೇಶಿಸುವ ಅವಕಾಶ ಕಳೆದುಕೊಂಡರು.