ಕ್ಷಮೆಯಾಚನೆ ಕೇವಲ ಪೇಪರ್ ನಲ್ಲಿದೆ. ನ್ಯಾಯಾಂಗವನ್ನು ಹಗುರವಾಗಿ ಪರಿಗಣಿಸಿದಂತೆ ಕಾಣುತ್ತದೆ. ಆದ್ದರಿಂದ ನಿಮ್ಮ ಕ್ಷಮೆಯಾಚನೆಯನ್ನು ತಿರಸ್ಕರಿಸಿ ನ್ಯಾಯಾಂಗ ನಿಂದನೆ ವಿಚಾರಣೆ ಮಾಡಬೇಕಾಗುತ್ತದೆ ಎಂದು ಪತಂಜಲಿ ಮುಖ್ಯಸ್ಥ ಬಾಬಾ ರಾಮ್ ದೇವ್ ಮತ್ತು ಸಿಇಒ ಬಾಲಕೃಷ್ಣಗೆ ಸುಪ್ರೀಂಕೋರ್ಟ್ ಚಾಟಿ ಬೀಸಿದೆ.
ವೈದ್ಯಕೀಯ ಉತ್ಪನ್ನ ಹಾಗೂ ಆಧುನಿಕ ವೈದ್ಯ ಪದ್ಧತಿಯನ್ನು ಹಿಯಾಳಿಸಿದ್ದಕ್ಕಾಗಿ ವೈದ್ಯ ಸಂಘಟನೆ ದೂರಿನ ಮೇರೆಗೆ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಅಹಸಾಸುದ್ದೀನ್ ಮೊಹಮದ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನೊಳಗೊಂಡ ವಿಭಾಗೀಯ ಪೀಠ ಬಾಬಾ ರಾಮ್ ದೇವ್ ಮತ್ತು ಬಾಲಕೃಷ್ಣ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನಾಗಿ ಪರಿಗಣಿಸುವುದಾಗಿ ಎಚ್ಚರಿಸಿದೆ.
ನ್ಯಾಯಾಲಯ ಕಣ್ಣು ಮುಚ್ಚಿ ಕುಳಿತಿಲ್ಲ. ನೀವು ಮಾಡುವುದು ಒಂದು ಹೇಳುವುದು ಇನ್ನೊಂದು. ನಿಮ್ಮ ಬೇಷರತ್ ಕ್ಷಮೆಯಾಚನೆ ಕಾಟಾಚಾರಕ್ಕೆ ನೀಡಿದಂತೆ ಇದೆ. ಆದ್ದರಿಂದ ನ್ಯಾಯಾಂಗ ನಿಂದನೆ ಪ್ರಕರಣವನ್ನಾಗಿ ಪರಿಗಣಿಸುತ್ತೇವೆ ಎಂದರು.
ಬಾಬಾ ರಾಮ್ ದೇವ್ ಮತ್ತು ಬಾಲಕೃಷ್ಣ ಅವರ ವಿದೇಶೀ ಪ್ರವಾಸದ ಮಾಹಿತಿ ನೀಡಿ. ಯಾವ ದಿನಾಂಕ ಹೋಗುತ್ತಾರೆ? ಬರುತ್ತಾರೆ ಎಂಬುದು ಮಾಹಿತಿ ನೀಡಿ. ಆಮೇಲೆ ನಮಗೆ ಮಾಹಿತಿಯೇ ಇಲ್ಲ ಎಂದು ವಾದ ಮಾಡಬೇಡಿ. ಪ್ರಕರಣ ನ್ಯಾಯಾಲಯದಲ್ಲಿ ಇದೆ ಎಂದು ಗೊತ್ತಿದ್ದರೂ ಜನರ ದಿಕ್ಕು ತಪ್ಪಿಸುವ ಮಾಹಿತಿಯನ್ನು ನೀಡುತ್ತಲೇ ಬಂದಿದ್ದೀರಿ. ಎಚ್ಚರಿಕೆ ನೀಡಿದರೂ ಪುನರಾವರ್ತನೆ ಮಾಡಿರುವುದು ನಮಗೆ ತಿಳಿದಿದೆ ಎಂದು ಪೀಠ ಹೇಳಿತು.