ಸೂಕ್ತ ಪರವಾನಗಿ ಹೊಂದಿಲ್ಲದ ಕಾರಣ ಪವರ್ ಟಿವಿ ಚಾನೆಲ್ ಪ್ರಸಾರ ನಿಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ನಿರಂತರವಾಗಿ ಬಿತ್ತರಿಸುತ್ತಿದ್ದ ಪವರ್ ಟಿವಿ ಹೈಕೋರ್ಟ್ ಆದೇಶದ ಮೇರೆಗೆ ಕೆಲವು ದಿನಗಳಿಂದ ಪ್ರಸಾರ ಸ್ಥಗಿತಗೊಳಿಸಿತ್ತು.
ಪವರ್ ಟಿವಿಯ ಪರವಾನಗಿ 2021ರಲ್ಲಿ ಮುಗಿದಿದ್ದು, ಅದನ್ನು ನವೀಕರಣ ಮಾಡಿಕೊಂಡಿಲ್ಲ. ಹಾಗಾಗಿ ಪವರ್ ಟಿವಿಯ ಪ್ರಸಾರ ಸ್ಥಗಿತಗೊಳಿಸುವಂತೆ ಕೋರಿ ಜೆಡಿಎಸ್ ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಗೌಡ ಪತ್ನಿ ರಮ್ಯಾ ರಮೇಶ್ ಮತ್ತು ಐಪಿಎಸ್ ಅಧಿಕಾರಿ ರವಿಕಾಂತೇಗೌಡ ಎಂಬುವವರು ಹೈಕೋರ್ಟ್ ಗೆ ಮೊರೆ ಹೋಗಿದ್ದರು.
ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಹೈಕೋರ್ಟ್ ಪವರ್ ಟಿವಿ ಪ್ರಸಾರವನ್ನು ನಿಲ್ಲಿಸುವಂತೆ ಸೂಚಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ ಸುಪ್ರೀಂಕೋರ್ಟ್ ಪ್ರಸಾರ ತಡೆ ಆದೇಶಕ್ಕೆ ತಡೆ ನೀಡಿದೆ.
ಪವರ್ ಟಿವಿ ಪ್ರಸಾರ ನಿಲ್ಲಿಸಿರುವುದು ಮಾಧ್ಯಮದ ಹಕ್ಕು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಶುಕ್ರವಾರ ನೀಡಿದ ಆದೇಶದಲ್ಲಿ ತಿಳಿಸಿದೆ.
ಈ ಬೆಳವಣಿಗೆ ಗಮನಿಸಿದರೆ ಮಾಧ್ಯಮದ ಹಕ್ಕು ಕಸಿಯುವ ರಾಜಕೀಯ ವೇದಾಂತ ಅಡಗಿರುವುದು ಸ್ಪಷ್ಟವಾಗಿದೆ. ಸರ್ಕಾರ ಮಾಧ್ಯಮದ ಹಕ್ಕು ರಕ್ಷಣೆಗೆ ಮುಂದಾಗಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.
ಪವರ್ ಟಿವಿ ಚಾನೆಲ್ ಜೆಡಿಎಸ್ ನ ಹಾಸನದ ಮಾಜಿ ಸಂಸದ ಪ್ರಜ್ಞಲ್ ರೇವಣ್ಣ ಮತ್ತು ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯಗಳನ್ನು ಸತತವಾಗಿ ಪ್ರಸಾರ ಮಾಡುತ್ತಾ ಬಂದಿತ್ತು.