ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ಅಗ್ರ 10ರೊಳಗೆ ಪ್ರವೇಶಿಸಿದರೆ, ಆರ್.ಅಶ್ವಿನ್ ಅವರನ್ನು ಹಿಂದಿಕ್ಕಿ ಮಧ್ಯಮ ವೇಗಿ ಜಸ್ ಪ್ರೀತ್ ಬುಮ್ರಾ ನಂ.1 ಟೆಸ್ಟ್ ಬೌಲರ್ ಪಟ್ಟಕ್ಕೆ ಮರಳಿದ್ದಾರೆ.
ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತದ ಆಟಗಾರರು 2-0ಯಿಂದ ವೈಟ್ ವಾಷ್ ಸಾಧನೆ ಮಾಡಿದ್ದರು. ಆಟಗಾರರು ಭರ್ಜರಿ ಪ್ರದರ್ಶನ ನೀಡುವ ಮೂಲಕ ಐಸಿಸಿ ರ್ಯಾಂಕಿಂಗ್ ನಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ. ಅಲ್ಲದೇ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಫೈನಲ್ ಆಸೆ ಜೀವಂತವಾಗಿರಿಸಿಕೊಂಡಿದೆ.
ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್ ನಲ್ಲಿ 49 ಮತ್ತು ಅಜೇಯ 29 ರನ್ ಗಳಿಸಿದ್ದ ವಿರಾಟ್ ಕೊಹ್ಲಿ 6 ಸ್ಥಾನ ಬಡ್ತಿ ಪಡೆಯುವ ಮೂಲಕ ಐಸಿಸಿ ರ್ಯಾಂಕಿಂಗ್ ನಲ್ಲಿ 6ನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ. ಈ ಮೂಲಕ ಅಗ್ರ 10 ಬ್ಯಾಟ್ಸ್ ಮನ್ ಗಳ ಪಟ್ಟಿಯೊಳಗೆ ಮರಳಿದ್ದಾರೆ.
ಯಶಸ್ವಿ ಜೈಸ್ವಾಲ್ ಎರಡೂ ಇನಿಂಗ್ಸ್ ಗಳಲ್ಲಿ ಅರ್ಧಶತಕ ಸಿಡಿಸಿ ಮೂರನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. ಇದೀಗ ಇಂಗ್ಲೆಂಡ್ ನ ಜೋ ರೂಟ್ ಮತ್ತು ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್ ನಂತರದ ಸ್ಥಾನದಲ್ಲಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಭಾರತದ ಸ್ಪಿನ್ನರ್ ಆರ್.ಅಶ್ವಿನ್ ಅವರನ್ನು ಹಿಂದಿಕ್ಕಿ ಜಸ್ ಪ್ರೀತ್ ಬುಮ್ರಾ ಅಗ್ರಸ್ಥಾನಕ್ಕೆ ಮರಳಿದ್ದಾರೆ.