ನ್ಯಾಯಮೂರ್ತಿ ಎನ್. ಕೋಟಿಸ್ವರ್ ಸಿಂಗ್ ಮತ್ತು ನ್ಯಾಯಮೂರ್ತಿ ಆರ್. ಮಹದೇವನ್ ಸುಪ್ರೀಂಕೋರ್ಟ್ ನೂತನ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮರ್ಮು ಸುಪ್ರೀಂಕೋರ್ಟ್ ಗೆ ಇಬ್ಬರು ನ್ಯಾಯಮೂರ್ತಿಗಳ ನೇಮಕಕ್ಕೆ ಮಂಗಳವಾರ ಅಂಕಿತ ಹಾಕಿದರು. ಈ ಮೂಲಕ ಸುಪ್ರೀಂಕೋರ್ಟ್ ಗೆ ಇಬ್ಬರು ಹೊಸ ನ್ಯಾಯಮೂರ್ತಿಗಳನ್ನು ನೇಮಿಸಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ಕೊಲೆಜಿಯಂ ಈ ಇಬ್ಬರು ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು ಮಾಡಿತ್ತು. ಹೊಸದಾಗಿ ಇಬ್ಬರು ನ್ಯಾಯಮೂರ್ತಿಗಳ ಸೇರ್ಪಡೆಯಿಂದ ಸುಪ್ರೀಂಕೋರ್ಟ್ ನಲ್ಲಿ ನ್ಯಾಯಮೂರ್ತಿಗಳ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.
ಸುಪ್ರೀಂಕೋರ್ಟ್ ಗೆ ಇದೇ ಮೊದಲ ಬಾರಿ ಮಣಿಪುರದ ನ್ಯಾಯಮೂರ್ತಿ ಎನ್. ಕೋಟಿಸ್ವರ್ ಸಿಂಗ್ ನೇಮಕಗೊಂಡಿದ್ದಾರೆ. ಪ್ರಸ್ತುತ ಕೋಟಿಸ್ವರ್ ಜಮ್ಮು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ನಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋಟಿಸ್ವರ್ ಸಿಂಗ್ ಅವರ ತಂದೆ ಎನ್.ಇಟೊಮೊಬಿ ಸಿಂಗ್ ಮಣಿಪುರದ ಮೊದಲ ಅಡ್ವೋಕೇಟ್ ಜನರಲ್ ಆಗಿ ಖ್ಯಾತಿ ಪಡೆದಿದ್ದರು.
ನ್ಯಾಯಮೂರ್ತಿ ಮಹದೇವನ್ ಚೆನ್ನೈನಲ್ಲಿ ಜನಿಸಿದ್ದು, ಪ್ರಸ್ತುತ ಮದ್ರಾಸ್ ಹೈಕೋರ್ಟ್ ನಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಕರ್ತವ್ಯ ನಿವರ್ವಹಿಸುತ್ತಿದ್ದಾರೆ. ತಮ್ಮ ಅವಧಿಯಲ್ಲಿ 9000 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ ದಾಖಲೆಗೆ ಪಾತ್ರರಾಗಿದ್ದಾರೆ.