ದೇಶದ ಎಲ್ಲಾ ವಿಮಾನಗಳ ಇಂಜಿನ್ ಹಾಗೂ ವಿಮಾನಗಳ ಬಿಡಿಭಾಗಗಳ ಮೇಲೆ ಕೇಂದ್ರ ಸರ್ಕಾರ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಏಕರೂಪದ ಶೇ.5ರಷ್ಟು ಜಿಎಸ್ ಟಿ ತೆರಿಗೆ ವಿಧಿಸಿದೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜ್ರಾಪು ರಾಮಮೋಹನ್ ನಾಯ್ಡು ಸೋಮವಾರ ವಿಮಾನಗಳ ಇಂಜಿನ್ ಹಾಗೂ ಬಿಡಿಭಾಗಗಳ ಮೇಲೆ ಶೇ.5ರಷ್ಟು ತೆರಿಗೆ ವಿಧಿಸಿರುವುದನ್ನು ಘೋಷಿಸಿದರು.
ಈ ಹಿಂದೆ ದೇಶದ ವಿಮಾನಗಳು, ವಿಮಾನ ಇಂಜಿನ್ ಮತ್ತು ವಿಮಾನದ ಬಿಡಿಭಾಗಗಳ ಮೇಲಿನ ತೆರಿಗೆಯನ್ನು ಶೇ.5, ಶೇ.12 ಮತ್ತು ಶೇ.18ರಷ್ಟು ಎಂಬಂತೆ ವಿವಿಧ ರೀತಿಯ ತೆರಿಗೆ ವಿಧಿಸಲಾಗುತ್ತಿತ್ತು. ಈ ವ್ಯತ್ಯಸ ತಪ್ಪಿಸಿ ಏಕರೂಪದ ಶೇ.5ರಷ್ಟು ತೆರಿಗೆ ಜಾರಿಗೆ ತರಲಾಗಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಉದ್ಯಮವನ್ನು ಜಾಗತಿಕ ವಾಯುಯಾನ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸುವ ಉದ್ದೇಶದಿಂದ ಏಕರೂಪದ ತೆರಿಗೆ ಜಾರಿ ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ವಿಮಾನದ ಬಿಡಿಭಾಗಗಳ ವಸ್ತುಗಳ ಮೇಲೆ ಏಕರೂಪದ 5 ಶೇಕಡಾ ಐಜಿಎಸ್ಟಿ ದರವನ್ನು ಪರಿಚಯಿಸಿರುವುದು ವಿಮಾನಯಾನ ವಲಯಕ್ಕೆ ಪ್ರಮುಖ ಉತ್ತೇಜನವಾಗಿದೆ. ಈ ಹಿಂದೆ, ಜಿಎಸ್ಟಿ ದರಗಳು ಶೇಕಡಾ 5, ಶೇಕಡಾ 12, ಶೇಕಡಾ 18 ಮತ್ತು 28 ರಷ್ಟಿತ್ತು. ಈ ಹೊಸ ನೀತಿಯು ಈ ಅಸಮಾನತೆಗಳನ್ನು ನಿವಾರಿಸುತ್ತದೆ, ತೆರಿಗೆ ರಚನೆಯನ್ನು ಸರಳಗೊಳಿಸುತ್ತದೆ ಎಂದು ರಾಮಮೋಹನ್ ನಾಯ್ಡು ವಿವರಿಸಿದರು.