ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಕಾರು ಬರುತ್ತಿದ್ದ ಹಿನ್ನೆಲೆಯಲ್ಲಿ ವಾಹನ ತಡೆದು ನಿಲ್ಲಿಸಿದ್ದಕ್ಕೆ ಅಸಮಾಧಾನಗೊಂಡ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ವಾಹನವನ್ನು ಡಿವೈಡರ್ ಮೇಲೆ ಹತ್ತಿಸಿ ಉದ್ಧಟತನ ಮೆರೆದ ಘಟನೆ ಗಂಗಾವತಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ರಾಯಚೂರು ಪ್ರವಾಸ ಮುಗಿಸಿ ಗಂಗಾವತಿ ಮಾರ್ಗದಿಂದ ತೆರಳುತ್ತಿದ್ದ ಸಿಎಂ ಸಿದ್ದರಾಮಯ್ಯ ತೆರಳುತ್ತಿದ್ದರು. ಈ ವೇಳೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಸಿಬಿಎಸ್ ವೃತ್ತದ ಸಮೀಪ ಎಲ್ಲ ವಾಹನಗಳನ್ನು ಪೊಲೀಸರು ತಡೆದು ನಿಲ್ಲಿಸಿದ್ದರು.
ಗಂಗಾವತಿ ಶಾಸಕರಾಗಿರುವ ಜನಾರ್ದನ ರೆಡ್ಡಿ ವಡ್ಡರಹಟ್ಟಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಮುಗಿಸಿಕೊಂಡು ಮರಳುತ್ತಿದ್ದರು. ಈ ವೇಳೆ ಪೊಲೀಸರು ವಾಹನಗಳನ್ನು ತಡೆದು ನಿಲ್ಲಿಸಿದ್ದರಿಂದ ಕೆಲವು ಸಮಯ ಕಾದ ನಂತರ ತಾಳ್ಮೆ ಕಳೆದುಕೊಂಡು ಸಿಎಂ ವಾಹನ ಬಂದರೆ ನನಗೇನು ಎಂದು ಪೊಲೀಸರಿಗೆ ಆವಾಜ್ ಹಾಕಿ ಡಿವೈಡರ್ ಮೇಲೆ ಸ್ವತಃ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ.
ಸಿಎಂ ಬರುತ್ತಿರುವ ಹಿನ್ನೆಲೆಯಲ್ಲಿ ಸಾಮಾನ್ಯ ನಾಗರಿಕರಂತೆಯೇ ಪೊಲೀಸರ ಸೂಚನೆ ಪಾಲಿಸಿದರು. ಆದರೆ ಕೆಲವು ನಿಮಿಷಗಳ ಕಾಲ ಕಾಯ್ದ ಅವರು, ವಾಹನವನ್ನು ರಸ್ತೆ ಡಿವೈಡರ್ ಹತ್ತಿಸಿ ರಾಂಗ್ ರೂಟ್ ನಲ್ಲಿಯೇ ವಾಹನ ಚಲಾಯಿಸಿಕೊಂಡು ಮುಂದೆ ಹೋದರು.
ಈ ವೇಳೆ ಶಾಸಕ ಜನಾರ್ದ ರೆಡ್ಡಿ ಸ್ವತಃ ಕಾರು ಚಲಾಯಿಸಿದ್ದರು. ರೆಡ್ಡಿ ವಾಹನ ಮುಂದೆ ಹೋಗುತ್ತಿದ್ದಂತೆ ಎದುರಿನಿಂದ ಅದೇ ರಸ್ತೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿದ್ದ ವಾಹನ ಸಾಗಿತು.