ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಉದ್ಘಾಟನೆಯಾದ 2 ತಿಂಗಳಲ್ಲೇ ದೇಶದ ಮೊದಲ ಸಮುದ್ರದೊಳಗಿನ ಕರಾವಳಿ ತೀರದ ಸುರಂಗ ಮಾರ್ಗ ಸೋರುತ್ತಿದೆ.
ಒಟ್ಟಾರೆ 12.19 ಮೀಟರ್ ಉದ್ದದ ಕರಾವಳಿ ತೀರದ ಸುರಂಗ ಮಾರ್ಗ 17ರಿಂದ 20 ಮೀಟರ್ ಸಮುದ್ರದೊಳಗೆ ಅವಳಿ ಮಾರ್ಗವಾಗಿದೆ. ಕಾಮಗಾರಿ ಪೂರ್ಣಗೊಂಡು 3 ತಿಂಗಳಾಗಿದ್ದು ಎರಡು ತಿಂಗಳ ಹಿಂದೆಯಷ್ಟೇ ಉದ್ಘಾಟನೆಯಾಗಿದೆ.
ಮಾರ್ಚ್ 11ರಂದು ಉದ್ಘಾಟನೆಯಾಗಿದ್ದು, ಒಂದು ಬದಿಯ ರಸ್ತೆಯಷ್ಟೇ ಬಳಕೆಯಲ್ಲಿದೆ. ಉದ್ಘಾಟನೆಯಾದಾಗಿನಿಂದ ಇದುವರೆಗೆ ಸುಮಾರು 7 ಲಕ್ಷ ವಾಹನಗಳು ಸಂಚರಿಸಿವೆ.
ಸೋಮವಾರದಿಂದ ಸುರಂಗದಲ್ಲಿ ಸೋರಿಕೆ ಕಂಡು ಬರುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋಗಳು ಪ್ರಸಾರವಾಗುತ್ತಿದ್ದು, ಭಾರೀ ಸುದ್ದಿ ಆಗುತ್ತಿದೆ. ಬೇಸಿಗೆ ಕಾಲದಲ್ಲಿ ಸುರಿದ ಅಲ್ಪ ಮಳೆಗೆ ಸುರಂಗ ಸೋರಿಕೆಯಾಗುತ್ತಿದ್ದು, ಮುಂಗಾರು ಮಳೆ ಆರಂಭವಾದರೆ ಏನೆಲ್ಲಾ ಆಗಬಹುದು ಎಂಬ ಆತಂಕ ಮೂಡಿಸಿದೆ.
ಸುರಂಗದಲ್ಲಿ ಸೋರಿಕೆಗೆ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಸೋರಿಕೆ ಕುರಿತು ತನಿಖೆಗೆ ಆದೇಶಿಸಿದ್ದಾರೆ.
ಸುರಂಗದಲ್ಲಿ ಎರಡು ಮೂರು ಕಡೆ ಸೋರಿಕೆ ಆಗುತ್ತಿದೆ. ಸೋರಿಕೆಗೆ ಕಾರಣ ತಿಳಿದುಕೊಂಡು ಕೂಡಲೇ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ಏಕನಾಥ್ ಶಿಂಧೆ ತಿಳಿಸಿದರು.