ದೇವರನಾಡು ಕೇರಳದ ವಯನಾಡಿನಲ್ಲಿ 3 ಬಾರಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ.
ಮೆಪ್ಪಾಡಿಯಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ಭೂಕುಸಿತದಲ್ಲಿ ನೂರಾರು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಭಾರೀ ಮಳೆಯ ನಡುವೆಯೂ ಎನ್ ಆಡಿಆರ್ ಎಫ್, ಪೊಲೀಸ್ ಸೇರಿದಂತೆ ಹಲವು ಸಂಸ್ಥೆಗಳು ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಿವೆ.
ಭಾರೀ ಮಳೆಯಿಂದ ಒಂದು ಸೇತುವೆ ಕೊಚ್ಚಿ ಹೋಗಿದ್ದು, ಹಲವಾರು ರಸ್ತೆಗಳು ನಾಪತ್ತೆಯಾಗಿವೆ. ಭೂಕುಸಿತದಿಂದ ಮುಂಡಕೈ, ಚೂರಲಮಲ, ಅಟ್ಟಮಲ ಮತ್ತು ನೂಲ್ ಪೂಜಾ ಪ್ರದೇಶಗಳಲ್ಲಿ ಭಾರೀ ಹಾನಿ ಉಂಟಾಗಿದ್ದು, ಸಂಪರ್ಕ ಕಡಿತದಿಂದ ರಕ್ಷಣಾ ಕಾರ್ಯಕ್ಕೆ ಭಾರೀ ಹಿನ್ನಡೆ ಉಂಟಾಗಿದೆ.
ಹಾನಿಯಾದ ಪ್ರದೇಶಗಳಿಗೆ ಸಂಪರ್ಕ ಸಾಧಿಸಲು ಪ್ರಯತ್ನಗಳು ನಡೆಯುತ್ತಿವೆ. ರಕ್ಷಣಾ ಕಾರ್ಯಕ್ಕೆ ಹೆಲಿಕಾಫ್ಟರ್ ಬಳಕೆಗೆ ಸಿದ್ದವಾಗಿದೆ. ಆದರೆ ಹವಾಮಾನ ವೈಪರಿತ್ಯದಿಂದ ಸಾಧ್ಯವಾಗುತ್ತಿಲ್ಲ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ರಕ್ಷಣಾ ಕಾರ್ಯದಲ್ಲಿ ಎಲ್ಲಾ ಸಂಸ್ಥೆಗಳು ಕೈ ಜೋಡಿಸುವಂತೆ ಕರೆ ನೀಡಿದ್ದಾರೆ. ಅಲ್ಲದೇ ಸರ್ಕಾರದ ಎಲ್ಲಾ ಸಚಿವರು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಕೇರಳ ಸಿಎಂ ಜೊತೆ ಚರ್ಚೆ ನಡೆಸಿದ್ದು, ರಕ್ಷಣಾ ಕಾರ್ಯದಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದ್ದಾರೆ. ಅಲ್ಲದೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಕರೆ ಮಾಡಿ ಬಿಜೆಪಿ ಕಾರ್ಯಕರ್ತರು ರಕ್ಷಣಾ ಕಾರ್ಯದಲ್ಲಿ ಸಹಕರಿಸುವಂತೆ ಸೂಚಿಸಿದ್ದಾರೆ.
ಭೂಕುಸಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪರಿಹಾರ ಮೊತ್ತವನ್ನು ನೀಡುವುದಾಗಿ ಮೋದಿ ಘೋಷಿಸಿದ್ದಾರೆ.