ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪಾಕಿಸ್ತಾನಿ ಪ್ರಜೆ ಹಾಗೂ ಬಾಂಗ್ಲಾದೇಶ ಮೂಲದ ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿದ ಇಡೀ ಕುಟುಯಂಬವನ್ನು ಬಂಧಿಸಲಾಗಿದೆ.
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿಯ ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಿದ ಪೊಲೀಸರು ಪಾಕಿಸ್ತಾನ ಪ್ರಜೆ ಸೇರಿ ನಾಲ್ವರ ವಿದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ.
ಪಾಕ್ ಪ್ರಜೆ ಪತ್ನಿ ಬಾಂಗ್ಲಾದೇಶದವಳಾಗಿದ್ದು, ಹಾಗೂ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದ. ಬಂಧಿತ ವ್ಯಕ್ತಿ ಮೂಲತಃ ಪಾಕಿಸ್ತಾನಿ ಪ್ರಜೆ ಆಗಿದ್ದು, ಕಳೆದ ಒಂದು ವರ್ಷದಿಂದ ಬೆಂಗಳೂರಿನಲ್ಲಿ ವಾಸವಾಗಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಧರ್ಮದ ವಿಚಾರದಲ್ಲಿ ಪಾಕಿಸ್ತಾನದಲ್ಲಿ ಭಿನ್ನಾಭಿಪ್ರಾಯ ಉಂಟಾದ ಹಿನ್ನೆಲೆಯಲ್ಲಿ ಬಾಂಗ್ಲಾದೇಶಕ್ಕೆ ಪರಾರಿಯಾಗಿದ್ದ. ಬಾಂಗ್ಲಾದೇಶದ ಢಾಕಾದಲ್ಲಿ ವಾಸವಿದ್ದ ವೇಳೆ ಅಲ್ಲಿನ ಯುವತಿಯನ್ನು ವಿವಾಹವಾಗಿದ್ದ. 2014ರಲ್ಲಿ ಪತ್ನಿ ಜೊತೆ ಅಕ್ರಮವಾಗಿ ದೆಹಲಿಗೆ ಬಂದಿದ್ದು, ಸ್ಥಳೀಯ ವ್ಯಕ್ತಿಯ ನೆರವಿನಿಂದ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್ ಸೇರಿದಂತೆ ಎಲ್ಲಾ ದಾಖಲೆ ಮಾಡಿಸಿಕೊಂಡು ಕಳೆದ 10 ವರ್ಷದಿಂದ ಭಾರತದಲ್ಲೇ ವಾಸವಾಗಿದ್ದ.
2018ರಲ್ಲಿ ಕುಟುಂಬ ಸಮೇತ ಬೆಂಗಳೂರಿಗೆ ಬಂದಿದ್ದ. ಇಬ್ಬರು ಮಕ್ಕಳ ಜೊತೆಗೆ ದಂಪತಿಯ ಜಿಗಣಿಯಲ್ಲಿ ವಾಸವಿದ್ದ. ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳ ಖಚಿತ ಮಾಹಿತಿ ಆಧರಿಸಿ ಭಾನುವಾರ ತಡರಾತ್ರಿ ಮನೆ ಮೇಲೆ ದಾಳಿ ಮಾಡಿ ಬಂಧಿಸಿದ್ದಾರೆ.
ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ಮಾಡಲಾಗಿದೆ. ಘಟನೆ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗುತ್ತಿದೆ.