ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ವಾಯುಪಡೆ ವಾಹನಗಳ ಮೇಲೆ ಗುಂಡಿನ ದಾಳಿ ಮಾಡಿದ್ದ ಮೂವರು ಉಗ್ರರ ಫೋಟೊಗಳನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ.
ಕೆಲವು ದಿನಗಳ ಹಿಂದೆಯಷ್ಟೇ ವಾಯುಪಡೆ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಎರಡು ವಾಹನಗಳ ಮೇಲೆ ಉಗ್ರರು ದಾಳಿ ನಡೆಸಿದ್ದರು. ದಾಳಿಯಲ್ಲಿ ಒಬ್ಬ ಯೋಧ ಹುತಾತ್ಮರಾದರೆ, ನಾಲ್ವರು ಗಾಯಗೊಂಡಿದ್ದರು. ಪ್ರಕರಣ ಕುರಿತು ತನಿಖೆ ನಡೆಯುತ್ತಿದೆ.
ದಾಳಿ ನಡೆಸಿದ ಮೂವರು ಉಗ್ರರ ಗುರುತು ಪತ್ತೆ ಹಚ್ಚಲಾಗಿದ್ದು, ಪಾಕಿಸ್ತಾನದ ಮಾಜಿ ಸೇನಾ ಕಮಾಂಡರ್ ಇಲಿಯಾಸ್, ಲಷ್ಕರ್ ಕಮಾಂಡೊ ಅಬು ಹಮ್ಜಾ ಮತ್ತು ಹೇಡೂನ್ ಎಂದು ಗುರುತಿಸಲಾಗಿದ್ದು, ಇವರ ಫೋಟೊಗಳನ್ನು ಬಿಡುಗಡೆ ಮಾಡಲಾಗಿದೆ.
ಆಂಟಿ ಫ್ಯಾಸಿಸ್ಟ್ ಫ್ರಂಟ್ ಗುಂಪಿನಲ್ಲಿ ಈ ಮೂವರು ಉಗ್ರರು ಗುರುತಿಸಿಕೊಂಡಿದ್ದು, ರಜೌರಿ ಮತ್ತು ಪೂಂಚ್ ಜಿಲ್ಲೆಯ ಕಾಡಿನಲ್ಲಿ ಉಗ್ರ ಶೋಧ ಕಾರ್ಯ ತೀವ್ರಗತಿಯಲ್ಲಿ ನಡೆಯುತ್ತಿದೆ.