ಪಂಚೆ ಧರಿಸಿ ಬಂದಿದ್ದಕ್ಕಾಗಿ ಮಾಲ್ ಒಳಗೆ ಪ್ರವೇಶ ನೀಡದೇ ಬೆಂಗಳೂರಿನ ಜಿಟಿ ಮಾಲ್ ಅಪಮಾನಿಸಿದ ಘಟನೆ ವಿಧಾನಸಭೆ ಅಧಿವೇಶನದಲ್ಲೂ ಪ್ರತಿಧ್ವನಿಸಿದ್ದು, 7 ದಿನ ಬಂದ್ ಮಾಡುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.
ಗುರುವಾರ ವಿಧಾನ ಮಂಡಲ ಅಧಿವೇಶನ ಆರಂಭಗೊಂಡ ಬೆನ್ನಲ್ಲೇ ಪಂಚೆ ಧರಿಸಿ ಬಂದವರಿಗೆ ಪ್ರವೇಶವಿಲ್ಲ ಎಂದು ರೈತನಿಗೆ ಬೆಂಗಳೂರಿನ ಜಿಟಿ ಮಾಲ್ ನಲ್ಲಿ ಪ್ರವೇಶ ನಿರಾಕರಿಸಿದ ಘಟನೆ ಪ್ರಸ್ತಾಪವಾಗಿದ್ದು, ಸ್ಪೀಕರ್ ಯುಟಿ ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.
ಪಂಚೆ ನಮ್ಮ ಸಂಸ್ಕೃತಿ. ಅದನ್ನು ವಿರೋಧಿಸಲು ಅವರು ಯಾರು? ಅವರು ಯಾರೇ ಆಗಲಿ, ಎಷ್ಟೇ ದೊಡ್ಡವರಾಗಿರಲಿ ಅವರಿಗೆ ಬುದ್ದಿ ಕಲಿಸಬೇಕು ಎಂದು ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದಾಗ ಬೆಂಬಲ ವ್ಯಕ್ತಪಡಿಸಿದ ಲಕ್ಷ್ಮಣ್ ಸವದಿ ಒಂದು ವಾರ ಮಾಲ್ ಬಂದ್ ಮಾಡಿಸಿದರೆ ಬುದ್ದಿ ಬರುತ್ತದೆ ಎಂದು ಧ್ವನಿಗೂಡಿಸಿದರು.
ಇದಕ್ಕೆ ಸದಸ್ಯರಾದ ಪ್ರಕಾಶ್ ಕೋಳಿವಾಡ, ಅಶೋಕ್ ಪಟ್ಟಣ ಧ್ವನಿಗೂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಭೈರತಿ ಸುರೇಶ್, ಮಾಲ್ 7 ದಿನ ಬಂದ್ ಮಾಡಲು ಸೂಚಿಸಲಾಗುವುದು. ಈ ಬಗ್ಗೆ ಬಿಬಿಎಂಪಿ ಆಯುಕ್ತರ ಜೊತೆ ಮಾತನಾಡಿದ್ದು, ಈ ರೀತಿ ಘಟನೆಗಳಿಗೆ ಕ್ರಮ ಕೈಗೊಳ್ಳಲು ಕಾನೂನಲ್ಲಿ ಅವಕಾಶವಿದೆ ಎಂದರು.
ಇದೇ ವೇಳೆ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಜಿಟಿ ಮಾಲ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಅವರು ತಿಳಿಸಿದರು.