ಖಾಸಗಿ ಕಂಪನಿಗಳಲ್ಲಿ ಮೀಸಲು ವಿರೋಧಿಸಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಫೋನ್ ಪೇ ಮಾಲೀಕ ಸಮೀರ್ ನಿಗಮ್ ಭೇಷರತ್ ಕ್ಷಮೆಯಾಚಿಸಿದ್ದಾರೆ.
ಕರ್ನಾಟಕದಲ್ಲಿರುವ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲು ನೀಡುವ ಕಾಯ್ದೆ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿತ್ತು. ಈ ವಿಧೇಯಕನ್ನು ಫೋನ್ ಪೇ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಸಮೀರ್ ನಿಗಮ್ ಖಂಡಿಸಿದ್ದರು.
ಫೋನ್ ಪೇ ಕಂಪನಿ 25 ಸಾವಿರ ಮಂದಿಗೆ ಉದ್ಯೋಗ ನೀಡಿದೆ. ನಾನು ಯಾವುದೇ ಒಂದು ರಾಜ್ಯದಲ್ಲಿ 15 ವರ್ಷ ಇಲ್ಲ. ನನ್ನ ತಂದೆ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ದೇಶದ ಎಲ್ಲಾ ಭಾಗಗಳಲ್ಲಿ ಕೆಲಸ ಮಾಡಿದ್ದಾರೆ ಎಂದು ಸಮೀರ್ ಹೇಳಿದ್ದರು.
ಸಮೀರ್ ನಿಗಮ್ ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಫೋನ್ ಪೇ ಬಹಿಷ್ಕಾರ ಅಭಿಯಾನ ಆರಂಭಿಸಿದ್ದರು.
ಫೋನ್ ಪೇ ಬಹಿಷ್ಕಾರಕ್ಕೆ ಕರೆ ನೀಡಿದ 24 ಗಂಟೆಯಲ್ಲೇ ಸಮೀರ್ ನಿಗಮ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಕನ್ನಡಿಗರ ಕ್ಷಮೆಯಾಚಿಸಿದ್ದು, ಕನ್ನಡಿಗರಿಗೆ, ಕನ್ನಡನಾಡಿಗೆ ನೋವಾಗುವಂತೆ ಮಾತನಾಡುವ ಉದ್ದೇಶ ಹೊಂದಿರಲಿಲ್ಲ. ನನ್ನ ಮಾತಿನಿಂದ ಯಾರಿಗಾದರೂ ತೊಂದರೆ ಆಗಿದ್ದರೆ ನಿಜವಾಗಲೂ ಕ್ಷಮೆಯಾಚಿಸುತ್ತೇನೆ ಎಂದರು.
ನಾನು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ನೋಡಿದೆ. ಖಾಸಗಿ ಕಂಪನಿಗಳಲ್ಲಿ ಮೀಸಲಾತಿ ವಿಷಯದ ಕುರಿತ ನನ್ನ ಅಭಿಪ್ರಾಯದ ಕುರಿತು ವೈಯಕ್ತಿಕವಾಗಿ ಟೀಕೆ ಮಾಡಲಾಗಿದೆ. ಕನ್ನಡಿಗರನ್ನು ನೋವುಂಟು ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ ಎಂಬುದು ನಾನು ಇಲ್ಲಿ ಸ್ಪಷ್ಟಪಡಿಸುತ್ತೇನೆ. ಕನ್ನಡಿಗರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಬೇಷರತ್ ಕ್ಷಮೆಯಾಚಿಸುತ್ತೇನೆ. ಕನ್ನಡ ಜೊತೆಗೆ ಎಲ್ಲಾ ಭಾಷೆಗಳನ್ನೂ ನಾನು ಗೌರವಿಸುತ್ತೇನೆ. ಅವರ ಸಂಸ್ಕಾರ ಮತ್ತು ಸಂಸ್ಕೃತಿ ಗೌರವಿಸುತ್ತೇನೆ ಎಂದು ಎಕ್ಸ್ ಪೋಸ್ಟ್ ನಲ್ಲಿ ವಿವರಿಸಿದ್ದಾರೆ.