ಮಗ ಮೃತಪಟ್ಟಿದ್ದಾನೆ ಎಂದು ಅರಿಯದೇ ದೃಷ್ಟಿ ಸಮಸ್ಯೆ ಹೊಂದಿದ್ದ ವೃದ್ಧ ದಂಪತಿ ಐದು ದಿನಗಳ ಜೊತೆ ಶವದ ಜೊತೆ ಇದ್ದ ಮನಕಲುಕುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಬ್ಲೈಂಡ್ಸ್ ಕಾಲೋನಿಯ ನಿವಾಸಿಗಳು ಮನೆಯಿಂದ ಬರುತ್ತಿದ್ದ ಗಬ್ಬು ವಾಸನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪಿರಶೀಲನೆ ನಡೆಸಿದಾಗ ಈ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಮಾಜಿ ಸರ್ಕಾರಿ ನೌಕರರಾದ ಕಲುವಾ ರಾಮಣ್ಣ ಮತ್ತು ಪತ್ನಿ ಶಾಂತಿ ಕುಮಾರಿ 30 ವರ್ಷದ ಕಿರಿಯ ಪುತ್ರ ಪ್ರಮೋದ್ ಜೊತೆ ಬಾಡಿಗೆಯ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು. ಇಬ್ಬರು ದಂಪತಿಗೆ 60 ವರ್ಷ ಮೇಲ್ಪಟ್ಟು ವಯಸ್ಸಾಗಿತ್ತು. ಮದ್ಯದ ದಾಸನಾಗಿದ್ದ ಪ್ರಮೋದ್ ನನ್ನು ಪತ್ನಿ ಇಬ್ಬರು ಮಕ್ಕಳ ಜೊತೆ ಮನೆ ತೊರೆದು ಹೋಗಿದ್ದಳು.
ವೃದ್ಧ ದಂಪತಿಗಳು ಕೊಠಡಿಯಲ್ಲಿ ಮಗ ಇದ್ದಾನೆ ಎಂದು ಊಟ ಮತ್ತು ನೀರು ಕೊಡಲು ಪದೇ ಪದೆ ಕರೆಯುತ್ತಲೇ ಇದ್ದರು. ಮಗ ನಿದ್ದೆಯಲ್ಲೇ ಮೃತಪಟ್ಟು 5 ದಿನಗಳು ಕಳೆದಿದ್ದವು. ಆದರೆ ಅವರ ಧ್ವನಿ ಕ್ಷೀಣಿಸಿದ್ದರಿಂದ ಅಕ್ಕಪಕ್ಕದ ಮನೆಯವರೆಗೂ ಕೇಳಿಸುತ್ತಿರಲಿಲ್ಲ. ಮಗ ಬಾಗಿಲು ತೆರೆಯುತ್ತಿಲ್ಲ ಎಂದೇ ವೃದ್ಧ ದಂಪತಿ ಭಾವಿಸಿದ್ದರು.
ವೃದ್ಧ ದಂಪತಿಗೆ ಸರಿಯಾಗಿ ಕಣ್ಣು ಕಾಣಿಸುತ್ತಿರಲಿಲ್ಲ. ಅಲ್ಲದೇ ಸೂಕ್ತ ಆಹಾರ ಸೇವಿಸದೇ ಅವರು ಕೂಡ ಬಡವಾಗಿದ್ದರು. ಪೊಲೀಸರು ಮನೆಯೊಳಗೆ ಪ್ರವೇಶಿಸಿ ವಿಷಯ ತಿಳಿಯುತ್ತಿದ್ದಂತೆ ದಂಪತಿಗೆ ಆಹಾರ ನೀಡಿದ್ದಾರೆ.
ನಗರದಲ್ಲಿ ಮತ್ತೊಂದು ಕಡೆ ವಾಸವಾಗಿದ್ದ ಮತ್ತೊಬ್ಬ ಮಗನಿಗೆ ಪೋಷಕರ ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದು, ಪೋಷಕರನ್ನು ಹಸ್ತಾಂತರಿಸಿದ್ದಾರೆ. ಅಲ್ಲದೇ ಚೆನ್ನಾಗಿ ನೋಡಿಕೊಳ್ಳುವಂತೆ ಸೂಚಿಸಿದ್ದಾರೆ.