ಗೌತಮ್ ಗಂಭೀರ್ ರಾಜೀನಾಮೆಯಿಂದ ತೆರವಾದ ಕೋಚ್ ಸ್ಥಾನಕ್ಕೆ ಕೋಲ್ಕತಾ ನೈಟ್ ರೈಡರ್ಸ್ ಹುಡುಕಾಟ ನಡೆಸಿದ್ದು ಸಹಾಯಕ ಸಿಬ್ಬಂದಿ ತಂಡದಲ್ಲಿ ಸಮಗ್ರ ಬದಲಾವಣೆಯತ್ತ ಗಮನ ಹರಿಸಿದೆ.
ಗೌತಮ್ ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡ ಬೆನ್ನಲ್ಲೇ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಕೂಡ ಭಾರತ ತಂಡದ ಸಹಾಯಕ ಕೋಚ್ ಆಗಿ ನೇಮಕಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಕೋಚಿಂಗ್ ತಂಡದಲ್ಲಿ ಸಮಗ್ರ ಬದಲಾವಣೆಗೆ ಮುಂದಾಗಿದೆ.
ಭಾರತ ಟಿ-20 ತಂಡ ವಿಶ್ವಕಪ್ ಗೆಲ್ಲಲು ಕಾರಣರಾದ ರಾಹುಲ್ ದ್ರಾವಿಡ್ ಕೆಕೆಆರ್ ತಂಡಕ್ಕೆ ಕೋಚ್ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಕೆಕೆಆರ್ ಇದೀಗ ದಕ್ಷಿಣ ಆಫ್ರಿಕಾದ ಮಾಜಿ ಆಲ್ ರೌಂಡರ್ ದಿಗ್ಗಜ ಜಾಕ್ ಕಾಲಿಸ್ ಅವರನ್ನು ಸೆಳೆಯಲು ಪ್ರಯತ್ನಿಸಿದ್ದು, ಕೋಚ್ ಆಗಿ ಮರಳುವರೇ ಎಂಬ ಕುತೂಹಲ ಹೆಚ್ಚಿದೆ.
ಗಂಭೀರ್ ನಾಯಕತ್ವದಲ್ಲಿ ಕೆಕೆಆರ್ 2012 ಮತ್ತು 2014ರಲ್ಲಿ ಐಪಿಎಲ್ ಗೆದ್ದ ತಂಡದಲ್ಲಿ ಜಾಕ್ ಕಾಲಿಸ್ ಕೂಡ ಭಾಗಿಯಾಗಿದ್ದರು. 2015ರಲ್ಲಿ ಕೆಕೆಆರ್ ತಂಡದ ಬ್ಯಾಟಿಂಗ್ ಸಲಹೆಗಾರ ಆಗಿ ಕೂಡ ಕಾಲಿಸ್ ಸೇವೆ ಸಲ್ಲಿಸಿದ್ದರು.
ಇಂಗ್ಲೆಂಡ್ ಮುಖ್ಯ ಕೋಚ್ ಸ್ಥಾನಕ್ಕೆ ಟ್ರಾವಿಸ್ ಬೈಲಿಸ್ ತೆರಳಿದ್ದರಿಂದ ಕೆಕೆಆರ್ ತಂಡಕ್ಕೆ ಕಾಲಿಸ್ 2019ರವರೆಗೆ ಮುಖ್ಯ ಕೋಚ್ ಸ್ಥಾನ ಅಲಂಕರಿಸಿದ್ದರು. ನಂತರ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದರಿಂದ ಕೆಕೆಆರ್ ತೊರೆದಿದ್ದರು.