ಗ್ಯಾರಂಟಿ ಯೋಜನೆಗಳ ಜಾರಿಯಿಂದ ಆರ್ಥಿಕ ಹೊರೆಯಿಂದ ತತ್ತರಿಸುತ್ತಿರುವ ರಾಜ್ಯ ಸರ್ಕಾರ ಇದೀಗ ಸಿನಿಮಾ ಟಿಕೆಟ್, ಓಟಿಟಿ ನೋಂದಣಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಲೆ ಶೇ.1ರಿಂದ 2ರಷ್ಟು ಸೆಸ್ ಹೇರಲು ಮುಂದಾಗಿದೆ.
ರಾಜ್ಯ ಸರಕಾರ ಶುಕ್ರವಾರ ವಿಧಾನಸಭೆಯಲ್ಲಿ ಕರ್ನಾಟಕ ಸಿನಿಮಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ (ಕ್ಷೇಮಾಭಿವೃದ್ಧಿ) ಮಸೂದೆಯನ್ನು ಮಂಡಿಸಿದೆ.
ಸಿನಿಮಾ ಟಿಕೆಟ್, ಓಟಿಟಿಗಳ ಸಬ್ ಸ್ಕ್ರಿಬ್ಷನ್ ಹಾಗೂ ರಾಜ್ಯದ ಮೂಲದಿಂದ ಮನರಂಜನಾ ಕ್ಷೇತ್ರದಲ್ಲಿ ಗಳಿಸುವ ಆದಾಯಗಳ ಮೇಲೆ ಸೆಸ್ ಹೇರಲು ಚಿಂತನೆ ನಡೆಸಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಸೆಸ್ ಹೇರಿಕೆ ಕುರಿತು ಪರಾಮರ್ಶೆ ನಡೆಯಲಿದೆ ಎಂದು ಮಸೂದೆಯ ಕರಡು ಪತ್ರದಲ್ಲಿ ವಿವರಿಸಲಾಗಿದೆ.
ನಿಧಿ ಸಂಗ್ರಹಿಸಿ ಸಾಮಾಜಿಕ ಭದ್ರತೆ, ಆರ್ಥಿಕ ನೆರವು ಸೇರಿದಂತೆ ಕಲಾವಿದರ ಕ್ಷೇಮಾಭಿವೃದ್ಧಿಗಾಗಿ ಬಳಕೆ ಮಾಡುವ ಉದ್ದೇಶದಿಂದ ಸೆಸ್ ಹೇರಲು ನಿರ್ಧರಿಲಾಗಿದೆ. ನಿಧಿ ಹಂಚಿಕೆಗಾಗಿ 7 ಸದಸ್ಯರ ಸಮಿತಿ ರಚನೆ ಕೂಡ ಆಗಲಿದೆ ಎಂದು ಮಸೂದೆಯಲ್ಲಿ ಸ್ಪಷ್ಟನೆ ನೀಡಲಾಗಿದೆ.
ನಟ, ನಿರ್ದೇಶಕ, ಸಂಗೀತ ನಿರ್ದೇಶಕ, ಕಲಾ ನಿರ್ದೇಶಕ, ನೃತ್ಯಗಾರ, ಸಾಹಸ ಕಲಾವಿದ ಸೇರಿದಂತೆ ಕೌಶಲ್ಯ ಹೊಂದಿದ ಹಾಗೂ ಕೌಶಲ್ಯ ಹೊಂದಿಲ್ಲದ ಮಜರಂಜನಾ ಕ್ಷೇತ್ರದಲ್ಲಿ ಶ್ರಮಿಸುವ ಯಾವುದೇ ವ್ಯಕ್ತಿಗೆ ಈ ಕ್ಷೇಮಾಭಿವೃದ‍್ಧಿ ನಿಧಿಯಿಂದ ನೆರವು ನೀಡಲಾಗುವುದು ಎಂದು ತಿಳಿಸಲಾಗಿದೆ.
ಸಿನಿಮಾ ಕಲಾವಿದರು ಅಲ್ಲದೇ ರಂಗಭೂಮಿಯಲ್ಲಿ ನಾಟಕ, ಯಕ್ಷಗಾನ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡವರನ್ನು ಈ ಮಸೂದೆ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.