ಆಧುನಿಕ ವೈದ್ಯ ಪದ್ಧತಿ ಕುರಿತು ತಪ್ಪು ಸಂದೇಶ ರವಾನಿಸುವುದು ಹಾಗೂ ಸುಳ್ಳು ಜಾಹಿರಾತು ನೀಡುತ್ತಿರುವ ಪತಂಜಲಿ ಸಂಸ್ಥೆ ಮುಖ್ಯಸ್ಥ ಹಾಗೂ ಯೋಗ ಗುರು ಬಾಬಾ ರಾಮ್ ದೇವ್ ಕ್ರಮ ಎದುರಿಸಲು ಸಜ್ಜಾಗಿ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.
ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಮಂಗಳವಾರ ವಿಚಾರಣೆಗೆ ಖುದ್ದು ಹಾಜರಾದ ಬಾಬಾ ರಾಮ್ ದೇವ್ ಅವರನ್ನು ನ್ಯಾಯಮೂರ್ತಿಗಳು ತೀವ್ರ ತರಾಟೆಗೆ ತೆಗೆದುಕೊಂಡರು.
ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಅಹಸುದ್ದೀನ್ ಅಮಾನುಲ್ಲ ಅವರನ್ನೊಳಗೊಂಡ ವಿಭಾಗೀಯ ಪೀಠ, ರಾಮ್ ದೇವ್ ಮಾಡಿದ ಕ್ಷಮೆಯಾಚನೆಯಿಂದ ನಾವು ಸಂತುಷ್ಟರಾಗಿಲ್ಲ ಎಂದು ತಿಳಿಸಿತು. ಅಲ್ಲದೇ ಕ್ಷಮೆಯಾಚನೆಯನ್ನು ತಿರಸ್ಕರಿಸಿತು.
ನಿಮ್ಮ ಕ್ಷಮೆಯಾಚನೆಯನ್ನು ನಾವು ಸ್ವೀಕರಿಸುತ್ತಿಲ್ಲ ಅದಕ್ಕಾಗಿ ನಿಮ್ಮ ಕ್ಷಮೆ ಇರಲಿ. ಆದರೆ ನೀವು ಮಾಡುವ ಉದ್ದಿಮೆ ಸ್ಫೂರ್ತಿದಾಯಕವಾಗಿಲ್ಲ ಹಾಗೂ ವೃತ್ತಿಪರತೆ ಹೊಂದಿಲ್ಲ. ಬೇರೆಯವರು ಸರಿಯಿಲ್ಲ ಎಂದು ನಿಮ್ಮ ಉತ್ಪನ್ನ ಮಾರಾಟ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿತು.
ರಾಮ್ ದೇವ್ ಹಾಗೂ ರಾಮೃಕೃಷ್ಣ ಖುದ್ದು ನ್ಯಾಯಾಲಯಕ್ಕೆ ಹಾಜರಾಗಿದ್ದೂ ಅಲ್ಲದೇ ವೈಯಕ್ತಿಕವಾಗಿ ಕ್ಷಮೆಯಾಚಿಸುತ್ತೇವೆ. ಅಲ್ಲದೇ ನ್ಯಾಯಾಲಯ ಏನು ಸೂಚನೆ ನೀಡುತ್ತದೋ ಅದನ್ನು ಪಾಲಿಸುತ್ತೇವೆ ಎಂದು ಮನವಿ ಮಾಡಿದರು.
ಇದೇ ವೇಳೆ ಪತಂಜಲಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರದ ನಿಲುವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್, ಪತಂಜಲಿ ವಿರುದ್ಧ ಕೇಂದ್ರ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ. ಏಕೆ ಕಣ್ಮುಚ್ಚಿ ಕುಳಿತಿದೆ ಎಂದು ಅಚ್ಚರಿ ವ್ಯಕ್ತಪಡಿಸಿತು.
ಏಪ್ರಿಲ್ 10ಕ್ಕೆ ವಿಚಾರಣೆಯನ್ನು ಮುಂದೂಡಿದ ನ್ಯಾಯಾಲಯ, ವಿಚಾರಣೆ ವೇಳೆ ಬಾಬಾ ರಾಮ್ ದೇವ್ ಮತ್ತು ರಾಮಕೃಷ್ಣ ಇಬ್ಬರೂ ಹಾಜರಿರುವಂತೆ ಸೂಚಿಸಿದೆ.