ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಮಿಶ್ರಣ ವಿವಾದ ಕುರಿತು ತನಿಖೆ ನಡೆಸಲು ಸಿಬಿಐ ನಿರ್ದೇಶಕರ ನೇತೃತ್ವದ ಐವರು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಿ ಸುಪ್ರೀಂಕೋರ್ಟ್ ಆದೇಶಿಸಿದೆ.
ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆವಿ ವಿಶ್ವನಾಥನ್ ಅವರನ್ನೊಳಗೊಂಡ ವಿಭಾಗೀಯ ಪೀಠ ಶುಕ್ರವಾರ ಕೋಟ್ಯಂತರ ಜನರ ಭಾವನೆಗೆ ಧಕ್ಕೆ ತರುವ ಧಾರ್ಮಿಕ ವಿಷಯವಾಗಿದ್ದು ಸ್ವತಂತ್ರ ತನಿಖಾ ತಂಡದಿಂದ ತನಿಖೆ ಅಗತ್ಯವಿದೆ ಎಂದು ಹೇಳಿತು.
ಸಿಬಿಐ ನಿರ್ದೇಶಕ ನೇತೃತ್ವದ ಇಬ್ಬರು ಸಿಬಿಐ ಅಧಿಕಾರಿಗಳು, ಇಬ್ಬರು ಆಂಧ್ರಪ್ರದೇಶ ಪೊಲೀಸರು, ಒಬ್ಬ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಘಟಕದ (ಎಫ್ ಎಸ್ ಎಸ್ ಐ) ಅಧಿಕಾರಿ ಸೇರಿದಂತೆ ಐವರು ಸದಸ್ಯರ ವಿಶೇಷ ತನಿಖಾ ರಚಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.
ತಿರುಪತಿ ತಿಮ್ಮಪ್ಪನ ಲಡ್ಡುನಲ್ಲಿ ಕಲಬೆರಕೆ ಆಗಿದೆ ಎಂಬ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ನೀಡಿದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್ ಸಿಎಂ ಸ್ಥಾನದಲ್ಲಿದ್ದು ತನಿಖಾ ವರದಿ ಬರುವ ಮೊದಲೇ ಸಾರ್ವಜನಿಕವಾಗಿ ಹೇಳಿಕೆ ನೀಡಿ ರಾಜಕೀಯ ಬಣ್ಣ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು.