ಲೋಕಸಭಾ ಕ್ಷೇತ್ರದ ಮತದಾನ ಆರಂಭವಾಗುವ ಮುನ್ನವೇ ಗುಜರಾತ್ ನ ಸೂರತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಅವರ ಗೆಲುವು ಈಗ ಅನುಮಾನಕ್ಕೆ ಕಾರಣವಾಗಿದೆ. ಇದಕ್ಕೆ ಕಾರಣ ನಾಮಪತ್ರ ತಿರಸ್ಕೃತಗೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿಗೆ ಸೇರ್ಪಡೆ ಆಗುತ್ತಿರುವುದು.
ಹೌದು, ಕಾಂಗ್ರೆಸ್ ಅಭ್ಯರ್ಥಿ ನಿಲೇಶ್ ಕುಂಭಾನಿ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದು, ಇದು ಪ್ರಜಾಪ್ರಭುತ್ವಕ್ಕೆ ಎಸಗಿದ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಿಲೇಶ್ ಕಂಭಾನಿ ನಾಮಪತ್ರ ಸಲ್ಲಿಕೆ ವೇಳೆ ಮೂರು ಕಡೆ ಮೂರು ರೀತಿಯ ಸಹಿ ಹಾಕಿದ್ದರು. ಇದನ್ನು ಬಿಜೆಪಿ ಪ್ರಶ್ನಿಸಿತ್ತು. ಚುನಾವಣಾಧಿಕಾರಿಗಳು ಮೂರು ಬಾರಿ ಸ್ಪಷ್ಟನೆಗೆ ಅವಕಾಶ ನೀಡಿದ್ದರೂ ನಿಲೇಶ್ ಉತ್ತರ ನೀಡಿರಲಿಲ್ಲ. ಅಲ್ಲದೇ ಕೆಲವು ದಿನಗಳಿಂದ ಅವರು ನಾಪತ್ತೆಯಾಗಿದ್ದರು ಎಂಬ ಸುದ್ದಿ ಕೂಡ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದ 8 ಮಂದಿ ಏಕಾಏಕಿ ನಾಮಪತ್ರಗಳನ್ನು ವಾಪಸ್ ಪಡೆದಿದ್ದರು. ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ನಾಪತ್ತೆಯಾಗಿದ್ದು, ಇದೀಗ ದಿಢೀರನೆ ಪ್ರತ್ಯಕ್ಷ ಆಗಿದ್ದೂ ಅಲ್ಲದೇ ಬಿಜೆಪಿ ಪಕ್ಷಕ್ಕೆ ಸೇರುತ್ತಿದ್ದಾರೆ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಪ್ರಶ್ನೆ ಮಾಡುವಂತಾಗಿದೆ.
ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಅವಿರೋಧ ಆಯ್ಕೆಯಾಗಿದ್ದರೂ ಅಧಿಕೃತ ಘೋಷಣೆ ಇನ್ನೂ ಆಗಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್. ಪಾಟೀಲ್, ಮುಖೇಶ್ ದಲಾಲ್ ಪ್ರಧಾನಿ ಮೋದಿಗೆ ಗೆಲುವಿನ ಮೊದಲ ಕಮಲ ಅರ್ಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.