ಅಯೋಧ್ಯೆಯ ರಾಮಮಂದಿರದಲ್ಲಿ ಯಾವುದೇ ಸೋರಿಕೆ ಆಗಿಲ್ಲ. ಮಳೆಯ ನೀರು ಪೈಪ್ ಮೂಲಕ ಹರಿದಿದೆ ಎಂದು ರಾಮ್ ಜನ್ಮಭೂಮಿ ಟ್ರಸ್ಟ್ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಸ್ಪಷ್ಟನೆ ನೀಡಿದ್ದಾರೆ.
6 ತಿಂಗಳ ಹಿಂದೆಯಷ್ಟೇ ಉದ್ಘಾಟನೆಯಾದ ಪ್ರತಿಷ್ಠಿತ ಅಯೋಧ್ಯೆಯ ರಾಮಮಂದಿರ ಮುಂಗಾರು ಮಳೆಯ ಆರಂಭದಲ್ಲೇ ಸೋರುತಿದೆ. ಸರಿಯಾಗಿ ಒಳಚರಂಡಿ ವ್ಯವಸ್ಥೆ ಮಾಡದ ಕಾರಣ ಮೊದಲ ಮಳೆಗೆ ದೇವಸ್ಥಾನದ ಗರ್ಭಗುಡಿ ಸೋರುತ್ತಿದೆ ಎಂದು ರಾಮಮಂದಿರ ಟ್ರಸ್ಟ್ ಮುಖ್ಯ ಪೂಜಾರಿ ಸತ್ಯೇಂದ್ರ ದಾಸ್ ಹೇಳಿಕೆ ನೀಡಿದ್ದರು.
ಜನವರಿ 22ರಂದು ಈ ದೇವಸ್ಥಾನ ಉದ್ಘಾಟನೆ ಆಗಿದೆ. ಇಷ್ಟೊಂದು ಇಂಜಿನಿಯರ್ ಗಳು, ತಂತ್ರಜ್ಞರು ಇದ್ದರೂ ಈ ಲೋಪ ಹೇಗೆ ಆಯಿತು ಎಂದು ತಿಳಿಯುತ್ತಿಲ್ಲ. ಕೂಡಲೇ ಸೋರಿಕೆ ತಡೆಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಸತ್ಯೇಂದ್ರ ದಾಸ್ ಆರೋಪಿಸಿದ್ದರು.
ದೇವಸ್ಥಾನದಲ್ಲಿ ಸೋರಿಕೆ ಆಗುತ್ತಿಲ್ಲ. ದೇವಸ್ಥಾನದ ಎರಡನೇ ಮಹಡಿಯಲ್ಲಿ ಕಾಮಗಾರಿ ನಡೆದಿದೆ. ಎಲೆಕ್ಟ್ರಿಕ್ ವಯರ್ ಮತ್ತು ಪೈಪ್ ಗಳ ಅಳವಡಿಕೆ ಕೆಲಸ ನಡೆಯುತ್ತಿದ್ದು, ಇದರಿಂದ ಮಳೆಯ ನೀರು ಹರಿದು ಗರ್ಭಗುಡಿ ಬಳಿ ಮಳೆ ನೀರು ಸೋರಿಕೆಯಾಗಿದೆ. ನಾನು ಖುದ್ದು ದೇವಸ್ಥಾನವನ್ನು ಪರಿಶೀಲಿಸಿದ್ದೇನೆ ಎಂದು ನೃಪೇಂದ್ರ ಮಿಶ್ರಾ ಸ್ಪಷ್ಟಪಡಿಸಿದ್ದಾರೆ.
ಎರಡನೇ ಮಹಡಿಯ ಕಾಮಗಾರಿ ಪೂರ್ಣಗೊಂಡ ನಂತರ ಸೋರಿಕೆ ನಿಲ್ಲಲಿದೆ. ಸದ್ಯಕ್ಕೆ ಮಳೆ ನೀರು ಸೋರಿಕೆ ಆಗದಂತೆ ತಡೆಯಲು ಸೂಕ್ತ ಪರ್ಯಾಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಮುಂಗಾರಿನ ಮೊದಲ ಮಳೆಗೆ ರಾಮಮಂದಿರ ಸೋರುತಿದೆ. ಅದರಲ್ಲೂ ರಾಮಮಂದಿರದ ಮೂರ್ತಿ ಪ್ರತಿಷ್ಠಾಪನೆ ಮಾಡಲಾದ ಗರ್ಭಗುಡಿಯ ಸಮೀಪವೇ ನಿರ್ದಿಷ್ಟವಾಗಿ ಸೋರುತಿದೆ. ಒಳಚರಂಡಿ ವ್ಯವಸ್ಥೆ ಸರಿಯಾಗಿ ಮಾಡದೇ ಇರುವ ಕಾರಣ ಸೋರಿಕೆ ಆಗುತ್ತಿದೆ ಎಂದು ಸತ್ಯೇಂದ್ರ ದಾಸ್ ವಿವರಿಸಿದ್ದಾರೆ.
2025 ಜುಲೈಗೆ ರಾಮಮಂದಿರ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಗುರಿ ಇಟ್ಟುಕೊಳ್ಳಲಾಗಿದೆ. ಆದರೆ ಈ ರೀತಿ ತರಾತುರಿಯಲ್ಲಿ ಮಾಡಿದರೆ ಪರಿಪೂರ್ಣ ಮಂದಿರ ಆಗುವುದು ಅನುಮಾನ. ಅಲ್ಲದೇ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವೂ ಇಲ್ಲ ಎಂದು ಅವರು ಹೇಳಿದರು.