ಭಾರತೀಯ ರೈಲ್ವೆ ನಿರ್ವಹಣಾ ಸೇವೆ (IRMS) ಅಧಿಕಾರಿ ಸತೀಶ್ ಕುಮಾರ್ ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಗಿ ನೇಮಕಗೊಂಡಿದ್ದಾರೆ. ಈ ಮೂಲಕ ಪರಿಶಿಷ್ಟ ಜಾತಿ ಅಥವಾ ದಲಿತ ಸಮುದಾಯದಿಂದ ವ್ಯಕ್ತಿಯೊಬ್ಬರು ಮೊದಲ ಬಾರಿಗೆ ಈ ಉನ್ನತ ಹುದ್ದೆಯನ್ನು ಅಲಂಕರಿಸಿದ ಗೌರವಕ್ಕೆ ಪಾತ್ರರಾಗಿದ್ದಾರೆ.
ಸತೀಶ್ ಕುಮಾರ್ ಅವರ ಅಧಿಕಾರಾವಧಿ ಸೆಪ್ಟೆಂಬರ್ 1 ರಂದು ಪ್ರಾರಂಭವಾಗಲಿದ್ದು, ಆಗಸ್ಟ್ 31 ರಂದು ನಿವೃತ್ತರಾಗಲಿರುವ ಮಂಡಳಿಯ ಜಯವರ್ಮ ಸಿನ್ಹಾ ನಂತರ ಈ ಹುದ್ದೆ ಅಲಂಕರಿಸಲಿದ್ದಾರೆ.
ಇಂಡಿಯನ್ ರೈಲ್ವೇ ಸರ್ವಿಸ್ ಆಫ್ ಮೆಕ್ಯಾನಿಕಲ್ ಇಂಜಿನಿಯರ್ಸ್ (IRSME) 1986ರ ಬ್ಯಾಚ್‌ನ ಸತೀಶ್ ಕುಮಾರ್, ರೈಲ್ವೆಯಲ್ಲಿ 34 ವರ್ಷಗಳ ಸೇವಾನುಭವ ಹೊಂದಿದ್ದಾರೆ. ನವೆಂಬರ್ 8, 2022ರಂದು, ಉತ್ತರ ಮಧ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿಕೊಂಡಿದ್ದ ಸತೀಶ್ ಕುಮಾರ್,
ಜೈಪುರದ ಪ್ರತಿಷ್ಠಿತ ಮಾಳವೀಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MNIT) ಯಿಂದ ಮೆಕಾನಿಕಲ್ ಇಂಜಿನಿಯರಿಂಗ್‌ನಲ್ಲಿ ಬಿಟೆಕ್ ಪೂರ್ಣಗೊಳಿಸಿದ ನಂತರ ಆಪರೇಷನ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದು ತಮ್ಮ ಜ್ಞಾನ ವೃದ್ಧಿಸಿಕೊಂಡರು.
ಸತೀಶ್ ಕುಮಾರ್ ಮಾರ್ಚ್ 1988 ರಲ್ಲಿ ಭಾರತೀಯ ರೈಲ್ವೆಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ನಂತರ ಅನೇಕ ವಲಯಗಳು ಮತ್ತು ವಿಭಾಗಗಳಲ್ಲಿ ವಿವಿಧ ಪ್ರಮುಖ ಹುದ್ದೆಗಳನ್ನು ಹೊಂದಿದ್ದಾರೆ. ಅವರ ಅಧಿಕಾರಾವಧಿಯುದ್ದಕ್ಕೂ, ಅವರು ಹೊಸತನವನ್ನು ಚಾಲನೆ ಮಾಡುವಲ್ಲಿ, ದಕ್ಷತೆಯನ್ನು ಹೆಚ್ಚಿಸುವಲ್ಲಿ ಮತ್ತು ರೈಲ್ವೆ ವ್ಯವಸ್ಥೆಯಲ್ಲಿ ನಿರ್ಣಾಯಕ ಸುರಕ್ಷತಾ ಸುಧಾರಣೆಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.