ಸಮೋಸಾ ತಿಂದ ಅನಾಥಾಶ್ರಮದ ಮೂವರು ಬಾಲಕಿಯರು ಮೃತಪಟ್ಟ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಅನಕಪಳ್ಳಿ ಜಿಲ್ಲೆಯಲ್ಲಿ ಸಂಭವಿಸಿದೆ.
ಕೊತ್ತುರತ್ತಲ ಮಂಡಲ್ ನ ಕೈಲಾಸ ಪಟ್ಟಣದಲ್ಲಿರುವ ಅನಾಥಾಶ್ರಮದಲ್ಲಿ ಭಾನುವಾರ ಈ ಘಟನೆ ಸಂಭವಿಸಿದೆ. ಸಮೋಸಾ ಸೇವಿಸಿದ 27 ಮಕ್ಕಳು ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಮೂವರು ಮೃತಪಟ್ಟಿದ್ದಾರೆ.
1ನೇ ತರಗತಿಯ ವಿದ್ಯಾರ್ಥಿನಿ ಜೋಶ್ನಾ, ಮೂರನೇ ತರಗತಿ ವಿದ್ಯಾರ್ಥಿನಿಯರಾದ ಭವಾನಿ ಮತ್ತು ಶ್ರದ್ಧಾ ಮೃತಪಟ್ಟ ದುರ್ದೈವಿಗಳು.
ಫುಡ್ ಪಾಯ್ಸನ್ ಆದ ಕಾರಣ ಈ ದುರ್ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದ್ದು, ಆಸ್ಪತ್ರೆಯಲ್ಲಿ 24 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇದರಲ್ಲಿ ಗಂಭೀರ ಸ್ಥಿತಿಯಲ್ಲಿರುವ 17 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗೆ ವಿಶಾಖಪಟ್ಟಣದ ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆನಾಥಾಶ್ರಮದಲ್ಲಿ 60 ಮಕ್ಕಳು ಇದ್ದು, ಈ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಲಾಗುತ್ತಿದೆ. ಅನಕಪಳ್ಳಿ ಜಿಲ್ಲಾಧಿಕಾರಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆಗೆ ಆದೇಶಿಸಿದ್ದಾರೆ.