ತಿರುಪತಿ ಲಡ್ಡುಗೆ ಬಳಸಲಾಗುವ ಲಡ್ಡುನಲ್ಲಿ ಕಲಬೆರಕೆ ತುಪ್ಪ ಬಳಸಲಾಗಿದೆ ಎಂಬ ವಿವಾದದ ಬೆನ್ನಲ್ಲೇ ತಿರುಪತಿಗೆ ಕಳುಹಿಸುತ್ತಿರುವ ಕರ್ನಾಟಕದ ನಂದಿನಿ ತುಪ್ಪಗೆ ಭಾರೀ ಬಿಗಿ ಭದ್ರತೆ ನೀಡಲಾಗುತ್ತಿದೆ.
ಹೌದು, ಕರ್ನಾಟಕ ಹಾಲು ಒಕ್ಕೂಟ ಸಿದ್ಧಪಡಿಸುವ ನಂದಿನಿ ತುಪ್ಪ ಇದೀಗ ತಿರುಪತಿ ತಿಮ್ಮಪ್ಪನ ಜನಪ್ರಿಯ ಲಡ್ಡು ತಯಾರಿಗೆ ಮತ್ತೆ ಬಳಸಲು ಆರಂಭಿಸಲಾಗಿದೆ. ತಮಿಳುನಾಡಿನ ಕಂಪನಿಯಿಂದ ತರಿಸಲಾಗುತ್ತಿದ್ದ ಕಡಿಮೆ ವೆಚ್ಚದ ತುಪ್ಪದಲ್ಲಿ ಕಲಬೆರಕೆ ಆಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೆಎಂಎಫ್ ಮತ್ತೆ ತುಪ್ಪ ಕಳುಹಿಸುವ ಟೆಂಡರ್ ಪಡೆದಿದೆ.
ಇದೀಗ ತಿರುಪತಿ ತಿಮ್ಮಪ್ಪನ ಲಡ್ಡು ತಯಾರಿಕೆಗೆ ನಂದಿನಿ ತುಪ್ಪವನ್ನೇ ಬಳಸಲಾಗುತ್ತಿದೆ. ಪ್ರತಿದಿನ ನಂದಿನಿ ತುಪ್ಪದಿಂದ ಸುಮಾರು 8ರಿಂದ 9 ಲಕ್ಷ ಲಡ್ಡುಗಳು ತಯಾರಾಗುತ್ತಿವೆ. ಇದರಿಂದ ಲಡ್ಡುಗೆ ಮತ್ತೆ ಹಳೆಯ ರುಚಿ ಕಂಡುಕೊಳ್ಳುತ್ತಿದೆ.
ತಿರುಪತಿಗೆ ಸಾಗಿಸಲಾಗುತ್ತಿರುವ ನಂದಿನಿ ತುಪ್ಪಕ್ಕೆ ಕೆಎಂಎಫ್ ಬಿಗಿ ಭದ್ರತೆ ಒದಗಿಸಿದ್ದು, ತುಪ್ಪ ಸಾಗಿಸುವ ಟ್ಯಾಂಕರ್ ಗೆ ಎಲೆಕ್ಟ್ರಿಕ್ ಲಾಕ್ ಅಳವಡಿಸಲಾಗಿದ್ದು, ಜಿಪಿಎಸ್ ಅಳವಡಿಸಲಾಗಿದೆ. ಈ ಮೂಲಕ ಕೆಎಂಎಫ್ ಅಧಿಕಾರಿಗಳು ಹಾಗೂ ದೇವಸ್ಥಾನದ ಸಿಬ್ಬಂದಿ ಮಾತ್ರ ಬಳಸಬಹುದಾಗಿದ್ದು, ಉಳಿದ ಯಾವುದೇ ವ್ಯಕ್ತಿ ಬಳಸಲು ಸಾಧ್ಯವಿಲ್ಲ.
ತುಪ್ಪದ ದರ ಕುರಿತ ವಿವಾದದ ಹಿನ್ನೆಲೆಯಲ್ಲಿ ತಿರುಪತಿಗೆ ಕಳೆದ 15 ವರ್ಷಗಳಿಂದ ತುಪ್ಪ ಸಾಗಿಸುತ್ತಿದ್ದ ಕೆಎಂಎಫ್ ಜೊತೆ ಆಂಧ್ರ ಪ್ರದೇಶ ಸರ್ಕಾರ ಒಪ್ಪಂದ ಮುರಿದಿತ್ತು. ಕರ್ನಾಟಕದಲ್ಲಿ ಮನೆಮಾತಾಗಿರುವ ಕೆಎಂಎಫ್ ನಂದಿನಿ ತುಪ್ಪ ಕೆಜಿಗೆ 1000 ರೂ. ನಿಗದಿಪಡಿಸಿದ್ದರೆ, ಆಂಧ್ರ ಸರ್ಕಾರ 320 ರೂ.ಗೆ ತಮಿಳುನಾಡಿನ ಕಂಪನಿಗೆ ಟೆಂಡರ್ ನೀಡಿತ್ತು.
ಇದೀಗ ತಿರುಪತಿಯ ಲಡ್ಡುನಲ್ಲಿ ಮೀನಿನ ಎಣ್ಣೆ, ದನದ ಕೊಬ್ಬು ಜೊತೆಗೆ ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆ ಮಿಶ್ರಣಗೊಂಡಿದೆ ಎಂದು ಲ್ಯಾಬ್ ವರದಿ ಬಂದಿತ್ತು. ಇದೀಗ ಕೇಂದ್ರ ಸರ್ಕಾರ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಬಂದ ಹಿನ್ನೆಲೆಯಲ್ಲಿ ಸಮಗ್ರ ವರದಿ ನೀಡುವಂತೆ ಆಂಧ್ರಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.