ತುಳಸಿ ಗಿಡವೂ ಪೂಜಾರ್ಹವಾದ ಸಸ್ಯವಾಗಿದೆ. ತುಳಸಿ ಸಸ್ಯದ ಮೇಲೆ ಬೀಸಿ ಬರುವ ಗಾಳಿ ಆರೋಗ್ಯಕರವಾಗಿರುತ್ತದೆ. ಕಾರಣ ಮನೆಯ ಬಾಗಿಲೆದುರಿಗೆ ತುಳಸಿ ಗಿಡವನ್ನು ಹಾಕಿ ಪೂಜಿಸುವ ಪದ್ದತಿ ಇದೆ. ತುಳಸಿ ಪೂಜೆಗಷ್ಟೇ ಅಲ್ಲದೆ ಆರೋಗ್ಯದಲ್ಲಿ ಏರುಪೇರಾದಾಗಲೂ ಅದನ್ನು ಔಷಧಿಯಾಗಿ ಬಳಸುತ್ತೇವೆ.
ತುಳಸಿ ಎಲೆಗಳ ಸೇವನೆಯಿಂದ ಕಫ ಕಟ್ಟುವುದು ನಿಲ್ಲುತ್ತದೆ. ತುಳಸಿಯಲ್ಲಿ ಲವಂಗ ಕೂಡಿಸಿ ಅರೆಯಿರಿ. ರಸ ತೆಗೆದು 2-3 ದಿನ ಸೇವಿಸುವುದರಿಂದ ಕೆಮ್ಮು ನಿಲ್ಲುತ್ತದೆ. ಹಸಿಶುಂಠಿ, ತುಳಸಿ ಅರೆದು, ಅದರ ಜೊತೆಗೆ ಜೇನುತುಪ್ಪವನ್ನು ಸೇರಿಸಿ ಸೇವಿಸಿದರೆ ಗಂಟಲು ಕೆರೆತ, ಕೆಮ್ಮು ಉಪಶಮನವಾಗುತ್ತದೆ.
ಮಕ್ಕಳಿಗೆ ಕೆಮ್ಮು, ಜ್ವರ ಕಾಡುತ್ತಿದ್ದರೆ ತುಳಸಿ ರಸದಲ್ಲಿ ಜೇನನ್ನು ಸೇರಿಸಿ ನೆಕ್ಕಿಸಿದರೆ ಕಡಿಮೆಯಾಗುತ್ತದೆ. ಇದರ ಸೇವನೆಯಿಂದ ನಪುಂಸಕತ್ವ ನಿವಾರಣೆಯಾಗುತ್ತದೆ. ಕೃಷ್ಣತುಳಸಿಯ ಸೇವನೆಯಿಂದ ಪಿತ್ತದೋಷ ನಿವಾರಣೆಯಾಗುತ್ತದೆ.
ತುಳಸಿ ರಸವನ್ನು ಮೊಡವೆಗಳಿಗೆ ಹಚ್ಚುವುದರಿಂದ, ಮೊಡವೆಗಳು ಹೋಗುತ್ತವೆ. ಪ್ರತಿನಿತ್ಯ ನಾಲ್ಕು ಚಮಚದಷ್ಟು ತುಳಸಿ ರಸವನ್ನು ಕುಡಿಯುತ್ತಿದ್ದರೆ, ಅರಿಶಿಣ ಕಾಮಾಲೆ ಗುಣವಾಗುತ್ತದೆ. ಮೂತ್ರದೋಷದ ನಿವಾರಣೆಗೆ ನಿಂಬೆರಸದೊಂದಿಗೆ ತುಳಸಿ ರಸವನ್ನು ಮಿಶ್ರಣ ಮಾಡಿ ತೆಗೆದುಕೊಳ್ಳಬೇಕು.
ತುಳಸಿ ಎಲೆ, ಈರುಳ್ಳಿ, ಕಾಳುಮೆಣಸು ಸಮ ಪ್ರಮಾಣದಲ್ಲಿ ಸೇರಿಸಿ, ಅರೆದು ಗುಳಿಗೆಗಳನ್ನು ಮಾಡಿ ದಿನದಲ್ಲಿ ಒಂದೊಂದರಂತೆ ಎರಡು ಸಲ ಗುಳಿಗೆ ಸೇವಿಸಿದರೆ ಮೂಲವ್ಯಾಧಿಯ ಸಮಸ್ಯೆ ಉಪಶಮನವಾಗುತ್ತದೆ.
ರಕ್ತದ ಶುದ್ಧತೆಗಾಗಿ ತುಳಸಿ ರಸಕ್ಕೆ ಹಸುವಿನ ಮಜ್ಜಿಗೆ ಸೇರಿಸಿ, ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ತುಳಸಿ ರಸದೊಂದಿಗೆ ಜೇನುತುಪ್ಪವನ್ನು ಸೇರಿಸಿ ಸೇವಿಸಿದರೆ, ಸಂಧಿವಾತ, ಅಂಗಾಂಗ ನೋವು ನಿವಾರಣೆಯಾಗುತ್ತದೆ. ತುಳಸಿ ರಸದಲ್ಲಿ ಕಾಳಮೆಣಸನ್ನು ಅರೆದು ಹಲ್ಲು, ಒಸಡುಗಳಿಗೆ ಲೇಪಿಸಿದರೆ ನೋವು ಉಪಶಮನವಾಗುತ್ತದೆ.
ತುಳಸಿ ರಸದಲ್ಲಿ ಅಡುಗೆ ಉಪ್ಪು ಕಲೆಸಿ ಚೇಳು ಕಡಿದ ಸ್ಥಳದಲ್ಲಿ ಹಚ್ಚಿದರೆ ನೋವಿನ ಬಾಧೆ ಕಡಿಮೆಯಾಗುತ್ತದೆ. ಒಣಗಿದ ತುಳಸಿ ಎಲೆಗಳ ಚೂರ್ಣವನ್ನು ನೀರಿನಲ್ಲಿ ಅರೆದು ಮುಖಕ್ಕೆ ಹಚ್ಚಿದರೆ, ಮುಖದ ಸೌಂದರ್ಯ ವೃದ್ಧಿಯಾಗುತ್ತದೆ.