ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ತ್ಯಜ್ಯ ವಿಲೇವಾರಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರದಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮೃತಪಟ್ಟ ದಾರುಣ ಘಟನೆ ಬೆಂಗಳೂರಿನ ಕೆಆರ್ ವೃತ್ತದ ಬಳಿ ಸಂಭವಿಸಿದೆ.
ಭಾನುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪ್ರಶಾಂತ್ (25) ಮತ್ತು ನಾಗಾವರದ ಪಿಜಿಯಲ್ಲಿ ವಾಸವಾಗಿದ್ದ ಆಂಧ್ರಪ್ರದೇಶ ಮೂಲದ ಇಂದುಪುರ ನಿವಾಸಿ ಶಿಲ್ಪಾ ಮೃತಪಟ್ಟ ದುರ್ದೈವಿಗಳು.
ದ್ವಿಚಕ್ರ ವಾಹನದಲ್ಲಿ ಮೆಜೆಸ್ಟಿಕ್‌ನಿಂದ ಕೆ.ಆರ್ ಸರ್ಕಲ್ ಮಾರ್ಗವಾಗಿ ಬರುತ್ತಿದ್ದಾಗ ಸಿಐಡಿ ಸಿಗ್ನಲ್ ಮಾರ್ಗದಿಂದ ಕೆ.ಆರ್ ವೃತ್ತದ ಮಾರ್ಗದ ತಿರುವಿನಲ್ಲಿ ವೇಗವಾಗಿ ಮುನ್ನುಗ್ಗಿದ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದಿದೆ. ಬೈಕ್ ಗೆ ಡಿಕ್ಕಿ ಹೊಡೆದರೂ ನಿಲ್ಲಿಸದೇ ಲಾರಿ ಚಲಾಯಿಸಿದದರಿಂದ 10 ಮೀಟರ್ ನಷ್ಟು ದೂರ ಬೈಕ್ ಸವಾರರನ್ನು ಎಳೆದೊಯ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಇಬ್ಬರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲು ಯತ್ನಿಸದರೂ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ. ಮೃತದೇಹಗಳನ್ನ ಸೆಂಟ್ ಮಾರ್ಥಸ್ ಶವಗಾರಕ್ಕೆ ರವಾನಿಸಲಾಗಿದೆ. ಸ್ಥಳಕ್ಕೆ ಉಪ್ಪಾರಪೇಟೆ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಯುವತಿಯ ಮದುವೆ ಮಾತುಕತೆ ನಡೆಸಿದ್ದ ಕುಟುಂಬ
ಮೃತಪಟ್ಟ ಶಿಲ್ಪಾ ಅವರ ಮದುವೆಗೆ ಕುಟುಂಬದವರು ಮಾತುಕತೆ ನಡೆಸಿದ್ದರು. ಭಾನುವಾರ ಬೆಳಿಗ್ಗೆಯೂ ಗಾರೆ ಕೆಲಸ ಮಾಡಿಕೊಂಡಿರುವ ಶಿಲ್ಪ ತಂದೆ ವೆಂಕಟರಾಮ ರೆಡ್ಡಿ ಗಾರೆ ಮೇಸ್ತ್ರಿ ಮದುವೆ ಮಗಳ ಜೊತೆ ಮದುವೆ ಬಗ್ಗೆ ಮಾತನಾಡಿದ್ದರು ಎಂದು ತಿಳಿದು ಬಂದಿದೆ.
ವೆಂಕಟರಾಮ ರೆಡ್ಡಿ ಅವರಿಗೆ ಒಟ್ಟು ಮೂವರು ಹೆಣ್ಣು ಮಕ್ಕಳಿದ್ದು, ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಆಗಿದೆ. ಶಿಲ್ಪ ಕೊನೆಯ ಮಗಳಾಗಿದ್ದು, ಮದುವೆ ತಯಾರಿ ಮಾಡಿಕೊಂಡು, ಅದಕ್ಕಾಗಿ ಚಿನ್ನವನ್ನು ಮಾಡಿಸಿಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.