ಬ್ಯಾಂಕ್ ಸಾಲ ತೀರಿಸಲಾಗದ ಕಾರಣ ಬೆದರಿ ಒಂದೇ ಕುಟುಂಬದ 5 ಮಂದಿ ವಿಷದ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಒಬ್ಬರು ಮೃತಪಟ್ಟ ದಾರುಣ ಘಟನೆ ಬಿಹಾರದಲ್ಲಿ ನಡೆದಿದೆ.
ಶನಿವಾರ ಬೆಳಿಗ್ಗೆ ಬಂಕಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ತಂದೆ ಮೃತಪಟ್ಟಿದ್ದಾರೆ. ಕುಟುಂಬದ ಇತರೆ ನಾಲ್ವರು ಸದಸ್ಯರು ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದಾರೆ.
ಬ್ಯಾಂಕ್ ನಿಂದ ಸಾಲ ಮರು ಪಾವತಿ ಮಾಡುವಂತೆ ಏಜೆಂಟ್ ಗಳು ನೀಡಿದ ಕಿರುಕುಳದಿಂದ ಬೇಸತ್ತ ಕುಟುಂಬ ಅತಿರೇಕದ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗಿದೆ.
ಕುಟುಂಬದ ಹಿರಿಯನಾಗಿರುವ ತಂದೆ ಕನ್ಹಯ್ಯ ಕುಮಾರ್ ಆಟೋ ಓಡಿಸಿ ಜೀವನ ನಡೆಸುತ್ತಿದ್ದಾರೆ. ಕುಟುಂಬ ನಿರ್ವಹಣೆಗೆ ಹಲವು ಬ್ಯಾಂಕ್ ಗಳಿಂದ ಸಾಲ ಪಡೆದಿದ್ದರು. ಆರ್ಥಿಕ ಸಮಸ್ಯೆಯಿಂದ ಸಾಲ ತೀರಿಸಲು ಆಗದೇ ತೊಂದರೆಗೆ ಸಿಲುಕಿದ್ದಾರೆ.
ಸಾಲ ತೀರಿಸುವಂತೆ ಬ್ಯಾಂಕ್ ಏಜೆಂಟ್ ಗಳು ಮನೆ ಮುಂದೆ ಗಲಾಟೆ ಮಾಡಿ ಕಿರುಕುಳ ನೀಡುತ್ತಿದ್ದರು. ಇದರಿಂದ ಅನ್ಯ ಮಾರ್ಗವಿಲ್ಲದೇ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದೆ. ಕನ್ಹಯ್ಯ ಕುಮಾರ್ ವಿಷಪ್ರಾಶನದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಬ್ಯಾಂಕ್ ಏಜೆಂಟ್ ಗಳ ಕಾಟದಿಂದ ಸಮಾಜದಲ್ಲಿ ತಲೆತಗ್ಗಿಸುವಂತೆ ಆಗಿದ್ದು, ಮಾನ ಮರ್ಯಾದೆ ಮಣ್ಣುಪಾಲಾಗಿದೆ. ಇನ್ನು ಬದುಕಿದ್ದು ಏನು ಪ್ರಯೋಜನ ಎಂದು ತಂದೆ-ತಾಯಿ ಮಾತನಾಡಿಕೊಳ್ಳುತ್ತಿದ್ದರು ಎಂದು 16 ವರ್ಷದ ಮಗಳು ಸವಿತಾ ಪೊಲೀಸರಿಗೆ ತಿಳಿಸಿದ್ದಾಳೆ.
ಕೀಟಗಳನ್ನು ಸಾಯಿಸಲು ಬಳಸುವ ಮಾತ್ರೆಗಳನ್ನು ಖರೀದಿಸಿ ಎಲ್ಲರಿಗೂ ನೀಡಿದ್ದು, 8 ವರ್ಷದ ಮಗ ಮಾತ್ರೆ ನುಂಗಿದ ಕೆಲವೇ ನಿಮಿಷಗಳಲ್ಲಿ ವಾಂತಿ ಮಾಡಿ ಮಾತ್ರೆ ಹೊರಗೆ ಹಾಕಿದ್ದಾನೆ. ಇದರಿಂದ ಆತ ಸಾವಿನ ದವಡೆಯಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿಯುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.