ಚಿಕ್ಕಬಳ್ಳಾಪುರ: ಜಮೀನು ವಿವಾದ ಪ್ರಕರಣದಲ್ಲಿ ‘ಬಿ-ರಿಪೋರ್ಟ್’ ಸಲ್ಲಿಸಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಇಬ್ಬರು ಪೊಲೀಸ್ ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಪಿಎಸ್ಐ ಶರಣಪ್ಪ ಮತ್ತು ಎಎಸ್ಐ ವೆಂಕಟೇಶಪ್ಪ ಅವರನ್ನು ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡಾಗಿ ಬಂಧಿಸಲಾಗಿದೆ.
ಮೊಟ್ಲೂರು ಗ್ರಾಮದ ರಘು ಎಂಬವರ ಜಮೀನು ವಿವಾದಕ್ಕೆ ಸಂಬಂಧಿಸಿದ ಗಲಾಟೆ ಪ್ರಕರಣದಲ್ಲಿ ಅನುಕೂಲಕರವಾಗಿ ‘ಬಿ-ರಿಪೋರ್ಟ್’ ಸಲ್ಲಿಸುವುದಕ್ಕಾಗಿ ಎಎಸ್ಐ ವೆಂಕಟೇಶಪ್ಪ ಒಂದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಪಿಎಸ್ಐ ಶರಣಪ್ಪ ಅವರ ಸೂಚನೆಯಂತೆ ಎಎಸ್ಐ ವೆಂಕಟೇಶಪ್ಪ ಈ ಡೀಲ್ ನಡೆಸುತ್ತಿದ್ದರು ಎನ್ನಲಾಗಿದೆ.
ಲಂಚ ಮೊತ್ತದ ಮೊದಲ ಕಂತಾಗಿ 70,000 ರೂಪಾಯಿ ಚಿಕ್ಕಬಳ್ಳಾಪುರ ನಗರದ ಕನ್ನಡ ಭವನದ ಬಳಿ ರಘು ಅವರಿಂದ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಎಎಸ್ಐ ವೆಂಕಟೇಶಪ್ಪ ಅವರನ್ನು ವಶಕ್ಕೆ ಪಡೆದರು.
ವೆಂಕಟೇಶಪ್ಪ ಅವರ ವಿಚಾರಣೆ ನಡೆಸಿದ ಲೋಕಾಯುಕ್ತ ತಂಡ, ಪಿಎಸ್ಐ ಶರಣಪ್ಪ ಪಾತ್ರದ ಬಗ್ಗೆ ಮಾಹಿತಿ ಪಡೆದು ವಶಕ್ಕೆ ಪಡೆದಿದ್ದಾರೆ. ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗಿದೆ.


