ಮುಂದಿನ ವಾರ 25ನೇ ವಸಂತಕ್ಕೆ ಕಾಲಿಡಲಿರುವ ಎಡಗೈ ಮಧ್ಯಮ ವೇಗಿ ಆಲ್ ರೌಂಡರ್ ಅರ್ಜುನ್ ತೆಂಡೂಲ್ಕರ್ ಕರ್ನಾಟಕ ವಿರುದ್ಧದ ಪಂದ್ಯದಲ್ಲಿ 9 ವಿಕೆಟ್ ಪಡೆದು ಮಿಂಚಿದ್ದಾರೆ.
ಕರ್ನಾಟಕ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ಕ್ಯಾಪ್ಟನ್ ಕೆ.ತಿಮ್ಮಯ್ಯ ಮೆಮೊರಿಯಲ್ ಪಂದ್ಯಾವಳಿಯಲ್ಲಿ ಗೋವಾ ತಂಡವನ್ನು ಪ್ರತಿನಿಧಿಸಿದ ಅರ್ಜುನ್ ತೆಂಡೂಲ್ಕರ್ 26.3 ಓವರ್ ಗಳಲ್ಲಿ 87 ರನ್ ಗೆ 9 ವಿಕೆಟ್ ಗಳಿಸಿ ಮಿಂಚಿದರು.
ಅರ್ಜುನ್ ತೆಂಡೂಲ್ಕರ್ ಮಾರಕ ದಾಳಿ ನೆರವಿನಿಂದ ಕರ್ನಾಟಕ ವಿರುದ್ಧ ಗೋವಾ ತಂಡ 189 ರನ್ ಗಳಿಂದ ಜಯಭೇರಿ ಬಾರಿಸಿತು.
ಕರ್ನಾಟಕ ತಂಡದಲ್ಲಿ 19 ವರ್ಷದೊಳಗಿನ ಹಾಗೂ 23 ವರ್ಷದೊಳಗಿನ ಯುವ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ನಿಖಿಲ್ ಜೋಷಿ ಮತ್ತು ಶರತ್ ಶ್ರೀನಿವಾಸ್ ಮಾತ್ರ ಅನುಭವಿ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದರು.
ಅರ್ಜುನ್ ತೆಂಡೂಲ್ಕರ್ ಎರಡೂ ಇನಿಂಗ್ಸ್ ಗಳಲ್ಲಿ ಒಟ್ಟಾರೆ 9 ವಿಕೆಟ್ ಪಡೆದರು. ಮೊದಲ ಇನಿಂಗ್ಸ್ ನಲ್ಲಿ 41 ರನ್ ಗೆ 5 ವಿಕೆಟ್ ಪಡೆದ ಅರ್ಜುನ್ ಕರ್ನಾಟಕ ತಂಡವನ್ನು 103 ರನ್ ಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ನಂತರ ಬ್ಯಾಟ್ ಮಾಡಿದ ಗೋವಾ ತಂಡ ಅಭಿನವ್ ತೆರ್ಜಾನಾ (109) ಶತಕದ ನೆರವಿನಿಂದ 413 ರನ್ ಗಳಿಸಿತು.
ಎರಡನೇ ಇನಿಂಗ್ಸ್ ಆಡಿದ ಕರ್ನಾಟಕ 30.4 ಓವರ್ ಗಳಲ್ಲಿ 121 ರನ್ ಗೆ ಪತನಗೊಂಡಿತು. ಅರ್ಜುನ್ ತೆಂಡೂಲ್ಕರ್ 46 ರನ್ ನೀಡಿ 4 ವಿಕೆಟ್ ಪಡೆದರು.
ಮುಂದಿನ ವಾರ 25ನೇ ವಸಂತಕ್ಕೆ ಕಾಲಿಡುತ್ತಿರುವ ಅರ್ಜುನ್ ತೆಂಡೂಲ್ಕರ್ 49 ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಆಡಿದ್ದು, 68 ವಿಕೆಟ್ ಪಡೆದಿದ್ದಾರೆ. 13 ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 21 ವಿಕೆಟ್ ಗಳಿಸಿದ್ದಾರೆ.