ಕೇಂದ್ರ ನೀತಿ ಆಯೋಗದ ಪದಾಧಿಕಾರಿಗಳ ಪುನರಚನೆ ಮಾಡಲಾಗಿದ್ದು, ಎನ್ ಡಿಎ ಮೈತ್ರಿಕೂಟದ ಭಾಗವಾಗಿರುವ ಜೆಡಿಎಸ್ ಮುಖಂಡ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಥಾನ ಪಡೆದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆಯಲು ವಿಫಲವಾದ ಹಿನ್ನೆಲೆಯಲ್ಲಿ ಮೈತ್ರಿ ಪಕ್ಷಗಳ ಸಹಾಯದಿಂದ ಕೇಂದ್ರದಲ್ಲಿ ಸರ್ಕಾರ ರಚಿಸಿರುವ ಬಿಜೆಪಿ ನೀತಿ ಆಯೋಗದಲ್ಲಿ ಮಿತ್ರ ಪಕ್ಷಗಳಿಗೆ ಹೆಚ್ಚು ಮಣೆ ಹಾಕಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಪುನರಚನೆ ಆಗಿರುವ ನೀತಿ ಆಯೋಗದಲ್ಲಿ ಕೇಂದ್ರ ಸಚಿವರಾದ ಬಿಜೆಪಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸ್ಥಾನ ಗಳಿಸಿದ್ದಾರೆ.
ನೀತಿ ಆಯೋಗದಲ್ಲಿ ವಿಶೇಷ ಆಹ್ವಾನಿತರಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜೆಪಿ ನಡ್ಡಾ, ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಿತನ್ ಮಹನ್ ಮಹಜಿ, ಮೀನುಗಾರಿಕೆ ಸಚಿವ ರಾಜೀವ್ ರಂಜನ್ ಸಿಂಗ್ ಸ್ಥಾನ ನೀಡಲಾಗಿದೆ.
ನೀತಿ ಆಯೋಗದಲ್ಲಿ 15 ಸಚಿವರಿಗೆ ಸ್ಥಾನ ನೀಡಲಾಗಿದ್ದು, ಪ್ರಧಾನಿ ಮೋದಿ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಆರ್ಥಿಕ ತಜ್ಞ ಸುಮನ್ ಕೆ.ಬೇರಿ ಮುಂದುವರಿದಿದ್ದಾರೆ. ವಿಜ್ಞಾನಿ ವಿ.ಕೆ. ಸರ್ವಂತ್, ಕೃಷಿ ಆರ್ಥಿಕ ತಜ್ಞ ರಮೇಶ್ ಚಾಂದ್, ಮಕ್ಕಳ ತಜ್ಞ ವಿಕೆ ಪಾಲ್, ಸಣ್ಣ ಉದ್ದಿಮೆಗಳ ತಜ್ಞ ಅರವಿಂದ್ ವೀರಮಣಿ ಆಯೋಗದಲ್ಲಿ ಪೂರ್ಣ ಪ್ರಮಾಣದ ಚಿಂತಕರ ಚಾವಡಿ ಸದಸ್ಯರಾಗಿ ನೇಮಕಗೊಂಡಿದ್ದಾರೆ.