ಮಹಾನಗರಿಗಳಾದ ಬೆಂಗಳೂರು ಮತ್ತು ಮುಂಬೈ ಸಂಪರ್ಕಿಸುವ 14 ಪಥದ ರಾಷ್ಟ್ರೀಯ ಹೆದ್ದಾರಿ ಯೋಜನೆಯನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ.
ಮುಂಬೈ, ಪುಣೆ ಮತ್ತು ಸಂಭಾಜಿನಗರ ಮೂಲಕ ಮುಂಬೈ ಸಂಪರ್ಕಿಸುವ 14 ಪಥದ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದ್ದು, 6 ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು. ಈ ರಸ್ತೆಯಲ್ಲಿ ವಾಹನ ಸವಾರರಿಗೆ ಶೇ.50ರಷ್ಟು ಸಮಯ ಉಳಿತಾಯವಾಗಲಿದೆ ಎಂದು ಅವರು ಹೇಳಿದ್ದಾರೆ.
ಪುಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ವಿಷಯ ತಿಳಿಸಿದ ಗಡ್ಕರಿ, ಮುಂಬೈನ ಅಟಲ್ ಸೇತುವೆಯಿಂದ ಹೆದ್ದಾರಿ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದ್ದು, ಪುಣೆ ರಿಂಗ್ ರಸ್ತೆಯ ಮೂಲಕ ಹಾದುಹೋಗಲಿದೆ. ಈ ರಸ್ತೆ ನಿರ್ಮಾಣದಲ್ಲಿ ತ್ಯಾಜ್ಯ ಮರುಬಳಕೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಬೆಂಗಳೂರು ಮೂಲಕ 2 ಮಾರ್ಗಗಳಾಗಿ ಮುಂಬೈ ಸಂಪರ್ಕಿಸಬಹುದು. ನೂತನವಾಗಿ ನಿರ್ಮಿಸಲಿರುವ 14 ಪಥದ ಎಕ್ಸ್ಪ್ರೆಸ್ ವೇಯನ್ನು ಪುಣೆ, ಸಂಭಾಜಿನಗರದ ಮೂಲಕ ಮುಂಬೈಗೆ ಸಂಪರ್ಕಿಸಲಿದ್ದರೆ, ಒಂದು ರಾಷ್ಟ್ರೀಯ ಹೆದ್ದಾರಿ ಮೂಲಕ ಬೆಂಗಳೂರು-ಹುಬ್ಬಳ್ಳಿ-ಬೆಳಗಾವಿ-ಪುಣೆ-ಮುಂಬೈಗೆ ಹೋಗಬಹುದು. ಆದರೆ ಇದು 986 ಕಿಲೋ ಮೀಟರ್ ಉದ್ದದ ಮಾರ್ಗವಾಗಿದೆ. ಮತ್ತೊಂದು ಮಾರ್ಗ ಬೆಂಗಳೂರು-ತುಮಕೂರು-ಚಿತ್ರದುರ್ಗ-ವಿಜಯನಗರ ಮತ್ತು ಬಾಗಲಕೋಟೆ ಮೂಲಕ ಹಾದು ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸಲಿದೆ. ಇದು ಸುಮಾರು 900 ಕಿಮೀ ಉದ್ದ ಇರಲಿದೆ.