ಎರಡು ವರ್ಷದಿಂದ ಕರ್ನಾಟಕದಲ್ಲಿದ್ದಿರಾ. ಕನ್ನಡ ಬರಲ್ವಾ? ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ವಿ.ಸೋಮಣ್ಣ ಮೈಸೂರು ವಿಭಾಗದ ರೈಲ್ವೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇತ್ತೀಚೆಗೆ ಮೈಸೂರಿಗೆ ಭೇಟಿ ನೀಡಿದ್ದ ವಿ.ಸೋಮಣ್ಣ ಮೈಸೂರು ವಿಭಾಗದ ರೈಲ್ವೆ ಮ್ಯಾನೇಜರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಸಾರ್ ನಿಮಗೆ ಹಿಂದಿ ಅರ್ಥ ಆಗಲ್ಲ ಅಂದರೆ ಭಾಷಾಂತರ (ಟ್ರಾನ್ಸ್ ಲೇಟ್) ಮಾಡ್ತೀನಿ ಎಂದು ಮುಂದೆ ಬಂದ ಮತ್ತೊಬ್ಬ ಅಧಿಕಾರಿಗೆ ಬಾಯಿ ಮುಚ್ಕೊಂಡಿರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾಷಾಂತರ ಅಗತ್ಯವಿಲ್ಲ. ನಿಮ್ಮ ಅಧಿಕಾರಿ ಎಷ್ಟು ಚೆನ್ನಾಗಿ ಕನ್ನಡ ಮಾತನಾಡ್ತಾರೆ ನೋಡ್ತಿನಿ. ಅವರು ಏನು ಹೇಳುತ್ತಾರೆ ಎಂಬುದು ನನಗೂ ಅರ್ಥ ಆಗುತ್ತೆ. ಭಾಷಾಂತರ ಮಾಡುವ ಅವಶ್ಯಕತೆ ಇಲ್ಲ ಎಂದು ಸೋಮಣ್ಣ ಹೇಳಿದ್ದಾರೆ.
ಮೈಸೂರು ವಿಭಾಗದ ರೈಲ್ವೆ ಮ್ಯಾನೇಜರ್ ಕನ್ನಡದಲ್ಲಿ ಮಾತನಾಡಲು ತಡವರಿಸುತ್ತಿರುವುದನ್ನು ಗಮನಿಸಿದ ಸಚಿವರು, ಎಷ್ಟು ವರ್ಷದಿಂದ ಕರ್ನಾಟಕದಲ್ಲಿ ಇದ್ದೀರಿ ಎಂದು ಪ್ರಶ್ನಿಸಿದರು. ಅದಕ್ಕೆ ಆ ಅಧಿಕಾರಿ 2 ವರ್ಷದಿಂದ ಇದ್ದೀನಿ ಅಂದರು.
ನಾನು ನಿಮ್ಮ ರಾಜ್ಯಕ್ಕೆ ಹೋಗುತ್ತೇನೆ. ದೆಹಲಿಗೂ ಹೋಗ್ತಿನಿ. ಅಲ್ಲಿ ನಾವು ಮಾತನಾಡಲು ಹಿಂದಿ ಕಲಿಯುತ್ತಿದ್ದೇನೆ. ನೀವು ಎರಡು ವರ್ಷದಿಂದ ಮೈಸೂರಲ್ಲಿ ಇದ್ದೀರ ಕನ್ನಡ ಕಲಿಯಲು ನಿಮಗೆ ಏನು ಕಷ್ಟ? ನೀವು ಕನ್ನಡ ಕಲಿತು ಮಾತನಾಡುವುದರಿಂದ ಸ್ಥಳೀಯರ ಜೊತೆ ಉತ್ತಮ ಸಂಪರ್ಕ ಹೊಂದಬಹುದು ಎಂದು ಸಲಹೆ ನೀಡಿದರು.
ನೀವು ಕನ್ನಡದ ಎಷ್ಟು ಪುಸ್ತಕ ಓದಿದ್ದೀರಾ ಎಂದು ಸೋಮಣ್ಣ ಕೇಳಿದಾಗ ಯಾವ ಪುಸ್ತಕವನ್ನೂ ಓದಿಲ್ಲ ಎಂದು ಅಧಿಕಾರಿ ಉತ್ತರಿಸಿದಾಗ, ಬೆಳಿಗ್ಗೆಯಿಂದ ರಾತ್ರಿವರೆಗೂ ಏನು ಮಾಡುತ್ತಿರಾ? ಅರ್ಧ ಗಂಟೆ ಕನ್ನಡ ಕಲಿಯಲು ವಿನಿಯೋಗಿಸಬಾರದಾ? ನೀವು ಕನ್ನಡ ಕಲಿತರೆ, ನಿಮ್ಮಿಂದ ನಾವು ಏನನ್ನಾದರೂ ಕಲಿಯಬಹುದು ಎಂದು ಹೇಳಿದರು.
ಕನ್ನಡವನ್ನು ಸುಲಭವಾಗಿ ಕಲಿಯಬಹುದು. 3 ರೂ. ಖರ್ಚು ಮಾಡಿದರೂ ಸಾಕು. ನೀವು ಹಣ ಖರ್ಚು ಮಾಡುವ ಅವಶ್ಯಕತೆಯೂ ಇಲ್ಲ. ನಮ್ಮ ದೇಶದಲ್ಲಿ ಯಾವ ಪ್ರಾಂತ್ಯಕ್ಕೆ ಹೋಗುತ್ತೇವೋ ಅಲ್ಲಿಯ ಭಾಷೆ ಕಲಿತು ಸಂಪರ್ಕ ಹೊಂದಬೇಕು. ಆಡಳಿತಾತ್ಮಕ ದೃಷ್ಟಿಯಿಂದ ಇದು ಒಳ್ಳೆಯದು ಎಂದು ಅವರು ಹೇಳಿದರು.
ಹಿಂದಿ ಹೇರಿಕೆ ವಿರುದ್ಧ ಕರ್ನಾಟಕದಲ್ಲಿ ದಿನೇದಿನೆ ಹೆಚ್ಚಾಗುತ್ತಿದ್ದು, ಸ್ವತಃ ಕೇಂದ್ರ ಸಚಿವರೇ ಹೊರರಾಜ್ಯದಿಂದ ಬಂದಿರುವ ಅಧಿಕಾರಿಯನ್ನು ಕನ್ನಡ ಕಲಿಯುವಂತೆ ತರಾಟೆಗೆ ತೆಗೆದುಕೊಂಡಿದ್ದಾರೆ.