ಪ್ರಧಾನಿ ನರೇಂದ್ರ ಮೋದಿ ಅವರ 10 ವರ್ಷಗಳ ಆಡಳಿತದ ಅವಧಿಯಲ್ಲಿ ರೈಲ್ವೆಯಲ್ಲಿ 5.02 ಲಕ್ಷ ಉದ್ಯೋಗ ಸೃಷ್ಟಿ ಮಾಡಲಾಗಿದೆ. ಹಿಂದಿನ ಯುಪಿಎ ಅವಧಿಗೆ ಹೋಲಿಸಿದರೆ 90 ಸಾವಿರ ಅಧಿಕ ಉದ್ಯೋಗ ಸೃಷ್ಟಿಸಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಶರದ್ ಪವಾರ್ ಬಣದ ಎನ್ ಸಿಪಿ ನಾಯಕ ಫೌಜಿಯಾ ಖಾನ್ ಪ್ರಶ್ನೆಗೆ ಉತ್ತರ ನೀಡಿದ ಅವರು, 2014ರಿಂದ 2024ರ ಅವಧಿಯ ಮೋದಿ ಆಡಳಿತದಲ್ಲಿ ರೈಲ್ವೆಯಲ್ಲಿ 5.02 ಉದ್ಯೋಗ ನೇಮಕಾತಿಗಳು ನಡೆದಿವೆ. ಹಿಂದಿನ ಯುಪಿಎ ಸರ್ಕಾರದ 2024ರಿಂದ 2014 ನಡುವಿನ 10 ವರ್ಷಗಳ ಆಡಳಿತದಲ್ಲಿ 4.11 ಲಕ್ಷ ಉದ್ಯೋಗ ಸೃಷ್ಟಿಸಲಾಗಿತ್ತು ತಿಳಿಸಿದರು.
2022 ಆಗಸ್ಟ್ ನಿಂದ 2022 ಅಕ್ಟೋಬರ್ ಅವಧಿಯಲ್ಲಿ 1.1 ಕೋಟಿ ರೈಲ್ವೆಯಲ್ಲಿ ಪ್ರವೇಶ ಪರೀಕ್ಷೆ ಬರೆದಿದ್ದು, 1,30,581 ಅಭ್ಯರ್ಥಿಗಳನ್ನು ನೇಮಕ ಮಾಡಲಾಗಿದೆ. ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಯಾವುದೇ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ರೈಲ್ವೆಯಲ್ಲಿ ಸುರಕ್ಷಿತ ಪ್ರಯಾಣಕ್ಕೆ ಒತ್ತು ನೀಡಲಾಗುತ್ತಿದೆ. ಇದರಿಂದ ಕಳೆದ 10 ವರ್ಷಗಳ ಅವಧಿಯಲ್ಲಿ ರೈಲ್ವೆ ಅಪಘಾತಗಳ ಸಂಖ್ಯೆಯಲ್ಲಿ 118 ರಿಂದ 40ಕ್ಕೆ ಇಳಿಸಲಾಗಿದೆ ಎಂದು ಅವರು ಹೇಳಿದರು.
2004-2014ರ ಯುಪಿಎ ಅವಧಿಯಲ್ಲಿ 1711 ರೈಲ್ವೆ ಅಪಘಾತಗಳು ಸಂಭವಿಸಿದ್ದು, 904 ಮಂದಿ ಮೃತಪಟ್ಟಿದ್ದು, 2014-2024ರ ಎನ್ ಡಿಎ ಅವಧಿಯಲ್ಲಿ 678 ರೈಲ್ವೆ ದುರಂತಗಳು ಸಂಭವಿಸಿದ್ದು, 748 ಮಂದಿ ಬಲಿಯಾಗಿದ್ದಾರೆ. ಅಪಘಾತಗಳ ಪ್ರಮಾಣದಲ್ಲಿ ಶೇ.60ರಷ್ಟು ಕುಸಿತ ಕಂಡು ಬಂದಿದ್ದರೆ, ಸಾವಿನ ಪ್ರಮಾಣ ಶೇ.17ರಷ್ಟು ಕಡಿಮೆ ಆಗಿದೆ ಎಂದು ರೈಲ್ವೆ ಸಚಿವರು ವಿವರಿಸಿದರು.
ರೈಲ್ವೆ ಸೇವೆಯಲ್ಲಿ ವೇಗದ ಜೊತೆಗೆ ಸುರಕ್ಷತೆಗೂ ಒತ್ತು ನೀಡಲಾಗುತ್ತಿದೆ. 2022-23ರ ಅವಧಿಯಲ್ಲಿ 87,736 ಕೋಟಿ ರೂ. ಬಜೆಟ್ ನಲ್ಲಿ ಹಣ ಮೀಸಲಿಡಲಾಗಿತ್ತು. 2024-25ರ ಅವಧಿಯಲ್ಲಿ 1,08,795 ಕೋಟಿ ರೂ. ಮೀಸಲಿಡಲಾಗಿದೆ. 9672 ಬೋಗಿಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ ಎಂದು ಅಶ್ವಿನಿ ವೈಭವ್ ಹೇಳಿದರು.