ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಮಾಸ್ಟರ್ ಮೈಂಡ್ ಮಾಜಿ ಸಚಿವ ಬಿ.ನಾಗೇಂದ್ರ ಎಂದು ಜಾರಿ ನಿರ್ದೇಶನಾಲಯ ಚಾರ್ಜ್‌ಶೀಟ್ ನಲ್ಲಿ ಆರೋಪಿಸಲಾಗಿದೆ.
82ನೇ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಮಂಗಳವಾರ ಸಲ್ಲಿಸಿದ ಚಾರ್ಜ್‌ಶೀಟ್ ನಲ್ಲಿ. ನಾಗೇಂದ್ರ ಸೇರಿ 5 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಯಾಗಿದೆ.
ನಾಗೇಂದ್ರ ಅಣತಿಯಂತೆ 187 ಕೋಟಿ ರೂ. ಹಗರಣ ನಡೆದಿದೆ ಎಂದು ಇಡಿ ಉಲ್ಲೇಖಿಸಿದೆ.
ಹೈದರಾಬಾದ್‌ನಲ್ಲಿದ್ದ ಮಧ್ಯವರ್ತಿ ಸತ್ಯನಾರಾಯಣ ವರ್ಮಾ ಜೊತೆ ನಾಗೇಂದ್ರ ನಿಕಟ ಸಂಪರ್ಕ ಹೊಂದಿದ್ದು, ನಾಗೇಂದ್ರ ಅಣತಿಯಂತೆಯೇ ಸಂಪೂರ್ಣ ಹಣದ ವಹಿವಾಟು ನಡೆದಿದೆ. ಈ ಹಣದಲ್ಲಿ 21 ಕೋಟಿ ರೂ. ಹಣವನ್ನು ಲೋಕಸಭಾ ಚುನಾವಣೆಗೆ ಬಳಸಲಾಗಿದೆ ಎಂದು ವಿವರಿಸಲಾಗಿದೆ. ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಉಲ್ಲೇಖಿಸಲಾಗಿದೆ.
ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ನೇಮಿಸಿದ್ದ ವಿಶೇಷ ತನಿಖಾ ತಂಡ ಪೊಲೀಸರು 12 ಮಂದಿ ಆರೋಪಿಗಳ ವಿರುದ್ಧ 3ನೇ ಎಸಿಎಂಎಂ ಕೋರ್ಟ್‌ನಲ್ಲಿ ಆಗಸ್ಟ್ ತಿಂಗಳಿನಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದರು.
ದೋಷಾರೋಪಪಟ್ಟಿಯಲ್ಲಿ ಮಾಜಿ ಸಚಿವ ನಾಗೇಂದ್ರ, ಬಸನಗೌಡ ದದ್ದಲ್ ಅವರ ಹೆಸರನ್ನು ಉಲ್ಲೇಖಿಸಿರಲಿಲ್ಲ.
ಸತ್ಯಾರಾಯಣ ವರ್ಮಾ, ಸತ್ಯನಾರಾಯಣ ಇಟ್ಕಾರಿ, ವಾಲ್ಮೀಕಿ ನಿಗಮ ಎಂಡಿ ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ, ನೆಕ್ಕುಂಟಿ ನಾಗರಾಜ್, ನಾಗೇಶ್ವರ್, ಸಾಯಿ ತೇಜ ಸೇರಿ 12 ಜನರ ಮೇಲೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿತ್ತು