ಗ್ರಾಮ ಆಡಳಿತಾಧಿಕಾರಿ ಹುದ್ದೆಗಳು ಮತ್ತು ಜಿಟಿಟಿಸಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸೆ.29ರಂದು ನಡೆಸಲಾಗಿದ್ದ ಕಡ್ಡಾಯ ಕನ್ನಡ ಪರೀಕ್ಷೆ ತಾತ್ಕಾಲಿಕ ಫಲಿತಾಂಶ ಪ್ರಕಟವಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸೋಮವಾರ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ್ದು, ಅಭ್ಯರ್ಥಿಗಳು ಕೆಇಎ ವೆಬ್‌ಸೈಟ್‌ಗೆ ಭೇಟಿ ನೀಡಿ ಫಲಿತಾಂಶ ವೀಕ್ಷಿಸಬಹುದಾಗಿದೆ.
ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ವೆಬ್ ಸೈಟ್‌ನ ಲಿಂಕ್‌ನಲ್ಲಿ https://cetonline.karnataka.gov.in/vaoresult/checkresult.aspx ನಮೂದಿಸಿ, ಫಲಿತಾಂಶ ಪಡೆಯಬಹುದು ಎಂದು ಕೆಇಎ ತಿಳಿಸಿದೆ.
ಸೆ.29ರಂದು ನಡೆದಿದ್ದ ಕಡ್ಡಾಯ ಕನ್ನಡ ಪರೀಕ್ಷೆಯ ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA Exam) ಇತ್ತೀಚೆಗೆ ಪ್ರಕಟಿಸಿತ್ತು. ಈ ಪರೀಕ್ಷೆಯಲ್ಲಿ ಅರ್ಹತಾ ಅಂಕ (ಕನಿಷ್ಠ 50) ಗಳಿಸಿದವರಿಗೆ ಮಾತ್ರ ಅ. 27ರಂದು ನಡೆಯುವ ಗ್ರಾಮ ಆಡಳಿತಾಧಿಕಾರಿ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುತ್ತದೆ.
ಗ್ರಾಮ ಆಡಳಿತಾಧಿಕಾರಿ ಹುದ್ದೆ ಮತ್ತು ಜಿಟಿಟಿಸಿ ಸಂಸ್ಥೆಯಲ್ಲಿನ ವಿವಿಧ ವೃಂದದ ಹುದ್ದೆಗಳಿಗೆ ಈಗಾಗಲೇ ಅರ್ಜಿ ಸಲ್ಲಿಸಿರುವವರಿಗೆ ಸೆ.29ರಂದು ಕಡ್ಡಾಯ ಕನ್ನಡ ಪರೀಕ್ಷೆ ನಡೆದಿತ್ತು. ಇನ್ನು ರಾಜ್ಯ ಸರ್ಕಾರ ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಿದ್ದರಿಂದ ಮತ್ತೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿತ್ತು. ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಅ. 26ರಂದು ಕಡ್ಡಾಯ ಕನ್ನಡ ಪರೀಕ್ಷೆ ನಡೆಯಲಿದ್ದು, ಅ. 27ರಂದು ಎಲ್ಲಾ ಅಭ್ಯರ್ಥಿಗಳಿಗೂ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆಯಲಿದೆ.