ಕುಸ್ತಿಪಟು ವಿನೇಶ್ ಪೊಗಟ್ ಫೈನಲ್ ನಿಂದ ಅನರ್ಹಗೊಂಡ ವಿವಾದ ರಾಜ್ಯಸಭೆಯಲ್ಲಿಂದು ಪ್ರತಿಧ್ವನಿಸಿದ್ದು, ಪ್ರತಿಪಕ್ಷಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ಜಗದೀಪ್ ಧಂಕರ್ ಕಲಾಪ ಬಹಿಷ್ಕರಿಸಿದ ಘಟನೆ ಗುರುವಾರ ನಡೆದಿದೆ.
ಗುರುವಾರ ಮಧ್ಯಾಹ್ನದ ನಂತರ ನಡೆದ ಕಲಾಪದ ವೇಳೆ ವಿನೇಶ್ ಪೊಗಟ್ ಅವರನ್ನು ತೂಕ ಹೆಚ್ಚಾಗಿದೆ ಎಂಬ ಕಾರಣಕ್ಕೆ ಅನರ್ಹಗೊಳಿಸಿರುವ ವಿಷಯದ ಕುರಿತು ಚರ್ಚೆಗೆ ಅವಕಾಶ ಕೋರಿ ಪ್ರತಿಪಕ್ಷಗಳು ಪಟ್ಟು ಹಿಡಿದವು.
ಪ್ರತಿಭಟನೆಯ ವೇಳೆ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಜೈರೂಮ್ ರಮೇಶ್ ನಗುತ್ತಿರುವುದನ್ನು ನೋಡಿ ಜಗದೀಪ್ ಧಂಕರ್, ನಿಮಗೆ ಸಭೆಯ ಮೇಲೆ ಗೌರವ ಕಡಿಮೆ ಆಗಿದೆ ಎಂಬುದು ಗೊತ್ತು ಎಂದು ಹೇಳಿದರು.
ನಿಮಗೆ ನನ್ನ ಮೇಲೆ ಅಲ್ಲ. ಈ ಆಸನದ ಮೇಲೆ ಅಸಮಾಧಾನ. ನಾನು ಈ ಸ್ಥಾನಕ್ಕೆ ಅರ್ಹನಲ್ಲ ಎಂಬುದು ನಿಮ್ಮ ಭಾವನೆ. ಅದಕ್ಕಾಗಿ ಹೀಗೆ ವರ್ತಿಸುತ್ತಿದ್ದೀರಿ ಎಂದು ಜಗದೀಪ್ ಧಂಕರ್ ಅಸಮಾಧಾನ ಹೊರಹಾಕಿದರು.
ಇವತ್ತಿನ ಘಟನೆಯನ್ನು ನೋಡಿದ ಮೇಲೆ ನನಗೆ ಅನ್ನಿಸಿದ್ದು ಇಷ್ಟೆ. ಈ ಸ್ಥಾನದಲ್ಲಿ ನಾನು ನೋಡಿಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ಸಭಾತ್ಯಾಗ ಮಾಡುತ್ತಿದ್ದೇನೆ ಎಂದು ಧಂಕರ್ ಹೇಳಿ ಸದನದ ಮಧ್ಯದಲ್ಲೇ ಹೊರನಡೆದರು. ಉಪ ಸಭಾಧ್ಯಕ್ಷ ಹರ್ವಿನಶ್ ನಾರಾಯಣ್ ನಂತರ ಕಲಾಪವನ್ನು ಮುನ್ನಡೆಸಿದರು.
ಬಿಜೆಪಿ ಮುಖಂಡ ಸತ್ಯ ಕುಮಾರ್ ಯಾದವ್ ಈ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಘಟನೆಯ ವೇಳೆ ಸಭೆ ಖಾಲಿಯಾಗಿತ್ತು.