ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮೇಲ್ಫಾವಣಿಗೆ ಬಡಿಯುವಂತೆ ಸಿಕ್ಸರ್ ಸಿಡಿಸಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 218 ರನ್ ಗಳಿಸಿತು.
ಗೆಲ್ಲಲೇಬೇಕಾದ ಒತ್ತಡದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಂಡಕ್ಕೆ ಮಿಂಚಿನ ಆರಂಭ ನೀಡಿದ್ದು, 29 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 47 ರನ್ ಗಳಿಸಿ ಅರ್ಧಶತಕ ವಂಚಿತರಾದರು. ಆದರೆ ಬೆಂಗಳೂರಿನಲ್ಲಿ ಆಡಿದ 89 ಐಪಿಎಲ್ ಪಂದ್ಯದಲ್ಲಿ 3000 ರನ್ ಪೂರೈಸಿದ ಮೊದಲ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು.
ಕೊಹ್ಲಿ, ಇನಿಂಗ್ಸ್ ನ ಮೂರನೇ ಓವರ್ ನಲ್ಲಿ ತುಷಾರ್ ದೇಶಪಾಂಡೆ ಎಸೆತದಲ್ಲಿ 98 ಮೀ. ಎತ್ತರದ ಸಿಕ್ಸರ್ ಸಿಡಿಸಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3000 ರನ್ ಪೂರೈಸಿದರು.
ರೋಹಿತ್ ಶರ್ಮ ಮುಂಬೈ ಪಿಚ್ ನಲ್ಲಿ ಆಡಿದ 80 ಪಂದ್ಯಗಳಲ್ಲಿ 2295 ರನ್ ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಆರ್ ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ 61 ಪಂದ್ಯಗಳಲ್ಲಿ 1960 ರನ್ ಬಾರಿಸಿ ಐಪಿಎಲ್ ನಲ್ಲಿ ಆಟಗಾರರು ತವರಿನ ಪಿಚ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಡೇವಿಡ್ ವಾರ್ನರ್ (1623, ಹೈದರಾಬಾದ್) ನಂತರ ಕ್ರಿಸ್ ಗೇಲ್ ಬೆಂಗಳೂರಿನಲ್ಲಿ ಆಡಿದ 45 ಪಂದ್ಯಗಳಲ್ಲಿ 1561 ರನ್ ಬಾರಿಸಿ ಅಗ್ರ 5ರಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ ತವರಿನಲ್ಲಿ ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಆರ್ ಸಿಬಿಯ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ.