ರಾಜ್ಯದಲ್ಲಿ ಗೋಬಿ ಮಂಚೂರಿ, ಕ್ಯಾಂಡಿ ಕಾಟನ್, ಕಬಾಬ್, ಪಾನಿಪೂರಿಗಳಲ್ಲಿ ಕ್ಯಾನ್ಸರ್ ಗೆ ಕಾರಣವಾಗುವ ರಾಸಾಯನಿಕ ಪದಾರ್ಥಗಳು ಪತ್ತೆಯಾದ ಬೆನ್ನಲ್ಲೇ ಇದೀಗ ಪ್ರತಿದಿನ ಸೇವಿಸುವ ಚಹಾದಲ್ಲೂ ಅಪಾಯಕಾರಿ ರಾಸಾಯನಿಕ ಪತ್ತೆಯಾಗಿದೆ.
ಹೌದು, ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಸಂಸ್ಥೆ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆ ಚಹಾ ಪುಡಿಯನ್ನು ಪರಿಶೀಲಿಸಿದಾಗ ಕ್ಯಾನ್ಸರ್ ಗೆ ಕಾರಣವಾಗುವ ರಾಸಾಯನಿಕಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ರಾಸಾಯನಿಕ ಮಿಶ್ರಿತ ಚಹಾ ಪುಡಿ ಮಾರಾಟ ನಿಷೇಧಿಸುವ ಸಾಧ್ಯತೆ ಇದೆ.
ರಾಜ್ಯಾದ್ಯಂತ ಸಂಗ್ರಹಿಸಿದ 49 ಮಾದರಿಯ ಚಹಾಪುಡಗಳ ಪೈಕಿ 45ರಲ್ಲಿ ರಾಸಾಯನಿಕ ಮಿಶ್ರಿತ ಚಹಾಪುಡಿ ಪತ್ತೆಯಾಗಿದೆ. ಚಹಾಗೆ ಬಣ್ಣ ಬರಲು ರಾಸಾಯನಿಕ ಪದಾರ್ಥ ಹಾಗೂ ತೂಕ ಹೆಚ್ಚಲು ಮರದ ಪುಡಿಗಳನ್ನು ಬಳಸಿರುವುದು ಲ್ಯಾಬ್ ಗಳಲ್ಲಿ ದೃಢಪಟ್ಟಿದೆ.
ರಾಜ್ಯದಲ್ಲಿ ಹೋಟೆಲ್, ರಸ್ತೆಬದಿ ಅಂಗಡಿಗಳಲ್ಲಿ ಮಾರಾಟವಾಗುವ ಆಹಾರ ಪದಾರ್ಥಗಳಲ್ಲಿ ಅನಾರೋಗ್ಯಕ್ಕೆ ಕಾರಣವಾಗುವ ಅಪಾಯಕಾರಿ ರಾಸಾಯನಿಕ ಅಂಶಗಳು ಪತ್ತೆಯಾಗುತ್ತಿದ್ದು, ಜನರಲ್ಲಿ ಆರೋಗ್ಯದ ಅರಿವು ಮೂಡಬೇಕಿದೆ.
ಕೆಲವು ಆಹಾರಗಳಲ್ಲಿ ಆಕರ್ಷಿತ ಬಣ್ಣಕ್ಕಾಗಿ ಕೆಮಿಕಲ್ ಬಳಸಿದರೆ, ಕೆಲವರು ರುಚಿ ಹೆಚ್ಚಲು, ತೂಕ ಹೆಚ್ಚಲು ಆಗಲು ಹೆಚ್ಚು ಲಾಭ ಗಳಿಸುವ ಉದ್ದೇಶದಿಂದ ರಾಸಾಯನಿಕಗಳನ್ನು ಬಳಸಲಾಗುತ್ತಿದೆ. ಈಗಾಗಲೇ ರಾಜ್ಯ ಸರ್ಕಾರ ಆಹಾರ ಪದಾರ್ಥಗಳಿಗೆ ಬಳಸುವ ಪದಾರ್ಥಗಳನ್ನು ಸರಬರಾಜು ಮಾಡುವ ಮಧ್ಯವರ್ತಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು, ಅವರ ಮೇಲೆ ಕಣ್ಣಿಡಲು ಕ್ರಮ ಕೈಗೊಂಡಿದೆ.