ಈಜಲು ತೆರಳಿದ್ದ ಭಾರತದ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳು ರಷ್ಯಾದ ಸೆಂಟ್ ಪೀಟ್ಸ್ ಬರ್ಗ್ ಸಮೀಪದ ನದಿಯಲ್ಲಿ ಮೃತಪಟ್ಟಿದ್ದಾರೆ.
ನದಿಗೆ ಬಿದ್ದಿದ್ದ ಒಬ್ಬ ಮಹಿಳಾ ವಿದ್ಯಾರ್ಥಿಯನ್ನು ರಕ್ಷಿಸಲಾಗಿದ್ದು, ಆಕೆಯನ್ನು ಆಸ್ಪತ್ರೆಗೆ ರವಾನಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಒಂದು ಮೃತದೇಹ ಪತ್ತೆಯಾಗಿದ್ದು, ಉಳಿದ ಮೃತದೇಹಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾದಲ್ಲಿರುವ ಭಾರತದ ರಾಯಭಾರ ಕಚೇರಿ ಮತ್ತು ರಷ್ಯಾದ ಅಧಿಕಾರಿಗಳು ಸ್ಥಳೀಯರ ಸಹಾಯದಿಂದ ಮೃತದೇಹ ಪತ್ತೆಗಾಗಿ ಶ್ರಮಿಸುತ್ತಿದೆ. ಶೀಘ್ರದಲ್ಲೇ ಮೃತರ ದೇಹಗಳನ್ನು ಸಂಬಂಧಿಕರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭಾರತದ ರಾಯಭಾರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ವೈದ್ಯಕೀಯ ಶಿಕ್ಷಣಗಾಗಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ರಷ್ಯಾಗೆ ತೆರಳುತ್ತಾರೆ. ರಷ್ಯಾದಲ್ಲಿ ಟ್ಯೂಶನ್ ಶುಲ್ಕ ಮತ್ತು ಇತರೆ ವೆಚ್ಚಗಳು ಕಡಿಮೆ ಆಗಿದ್ದರಿಂದ ಭಾರತೀಯರು ರಷ್ಯಾದಲ್ಲಿ ವೈದ್ಯ ಶಿಕ್ಷಣಕ್ಕೆ ಒತ್ತು ನೀಡುತ್ತಾರೆ.