ನೂರಾರು ಜನರ ಸಾವಿಗೆ ಕಾರಣವಾದ ಕೇರಳದ ವಯನಾಡ್ ಚೂರಲ್ಮಲ, ಮುಂಡಕ್ಕೈ ಭೂಕುಸಿತ ಪ್ರದೇಶದಲ್ಲಿ ಕಳೆದ 9 ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಸೇನೆಯು ಭಾಗಶಃ ವಾಪಸ್ ತೆರಳಿದೆ.
ಕಾರ್ಯಾಚರಣೆ ಮುಗಿಸಿ ಭಾಗಶಃ ವಾಪಸ್ ತೆರಳುವ ಸೇನೆಯ ನಿರ್ಧಾರವನ್ನು ಕೇರಳ ಲೋಕೋಪಯೋಗಿ ಸಚಿವ ಪಿ.ಎ ಮೊಹಮ್ಮದ್ ರಿಯಾಸ್ ತಿಳಿಸಿದರು. ‘ಸೇನೆಯು ತನ್ನ ಕೆಲಸ ಮುಗಿಸಿದೆ. ಅವರಿಗೆ ನಾವು ಕೃತಜ್ಞ’ ಎಂದು ರಿಯಾಸ್ ಹೇಳಿದರು.
190 ಅಡಿ ಉದ್ದದ ಬೈಲಿ ಸೇತುವೆಯನ್ನು ದಾಖಲೆ ಸಮಯದಲ್ಲಿ ನಿರ್ಮಿಸಿದೆ. ದುರಂತದಲ್ಲಿ ಧ್ವಂಸಗೊಂಡ ಮುಂಡಕ್ಕೈ, ಚೂರಲ್ಮಲ ಪ್ರದೇಶಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸುವಲ್ಲಿ ಸೇನೆಯು ಪ್ರಮುಖ ಪಾತ್ರ ವಹಿಸಿದೆ.
ಒಂದೇ ದೇಹ ಒಂದೇ ಯೋಚನೆಯಂತೆ ಕೆಲಸ ಮಾಡಿದ ಅವರು ಇಲ್ಲಿಂದ ತೆರಳುತ್ತಿರುವುದರಿಂದ ನೋವಾಗುತ್ತಿದೆ’ ಎಂದು ರಿಯಾಸ್ ಹೇಳಿದರು.
ಸಂಕಷ್ಟದ ಸಮಯದಲ್ಲಿ ಸೇನೆ ಇಲ್ಲಿಗೆ ಆಗಮಿಸಿದೆ. ಅವರನ್ನು ಬೀಳ್ಕೊಡಲು ಭಾವನಾತ್ಮಕವಾಗಿ ಸಾಧ್ಯವಾಗುತ್ತಿಲ್ಲ. ಅವರು ತಮ್ಮ ಕೆಲಸವನ್ನು ಸಂಪೂರ್ಣವಾಗಿ ಮುಗಿಸಿದ್ದಾರೆ. ತಮ್ಮ ಆಗಮನದ ಬಳಿಕ ಒಂದು ಜೀವಕ್ಕೂ ಹಾನಿಯಾಗದ ಹಾಗೆ ನೋಡಿಕೊಂಡಿದ್ದಾರೆ. ಅವರ ಸೇವೆಗೆ ನಾವು ಧನ್ಯವಾದ ಅರ್ಪಿಸುತ್ತೇವೆ’ ಎಂದು ಹೇಳಿದರು.
ನಾವು ಸಂಪೂರ್ಣವಾಗಿ ಹಿಂದೆ ಸರಿಯುತ್ತಿಲ್ಲ. ಬೈಲಿ ಸೇತುವೆ ನಿರ್ವಹಣೆ ಹಾಗೂ ಶೋಧ ಕಾರ್ಯಾಚರಣೆಗೆ ಬೆಂಬಲವಾಗಿ ನಿಲ್ಲಲು ಸಣ್ಣದೊಂದು ತಂಡ ಇಲ್ಲಿರಲಿದೆ. ನಾವು ಇಲ್ಲಿಂದ ತೆರಳುತ್ತಿದ್ದರೂ ನಮ್ಮ ಹೃದಯ ಇಲ್ಲಿನ ಜನರೊಂದಿಗೆ ಇದೆ. ನಾವು ಸಚಿವರಿಗೆ, ಜಿಲ್ಲಾಡಳಿತಕ್ಕೆ, ಪೊಲೀಸ್ ಹಾಗೂ ತುರ್ತು ಸೇವಾ ಸಿಬ್ಬಂದಿಗೆ ಕಾರ್ಯಾಚರಣೆಯಲ್ಲಿ ನಮ್ಮ ಜೊತೆಗೂಡಿದವರಿಗೆ, ಜನರಿಗೆ ನಾವು ಧನ್ಯವಾದ ಅರ್ಪಿಸುತ್ತೇವೆ’ ಎಂದು ಸ್ಥಳದಲ್ಲಿದ್ದ ಸೇನೆಯ ಅಧಿಕಾರಿಯೊಬ್ಬರು ಹೇಳಿದರು.