ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಬಾರ್ಡರ್- ಗವಾಸ್ಕರ್ ಟ್ರೋಫಿಗಾಗಿ ನಡೆಯಲಿರುವ 5 ಪಂದ್ಯಗಳ ಟೆಸ್ಟ್ ಸರಣಿಯ ಹೈವೋಲ್ಟೇಜ್ ಮೊದಲ ಪಂದ್ಯ ಶುಕ್ರವಾರ ಪರ್ತ್ ಮೈದಾನದಲ್ಲಿ ಆರಂಭಗೊಳ್ಳಲಿದೆ.
ಪರ್ತ್ ಮೈದಾನದಲ್ಲಿ ಆರಂಭಗೊಳ್ಳಲಿರುವ ಪಂದ್ಯದಲ್ಲಿ ಉಭಯ ತಂಡಗಳು ಗೆಲ್ಲುವ ಮೂಲಕ ಸರಣಿಯಲ್ಲಿ ಆರಂಭ ಪಡೆಯುವ ಗುರಿ ಹೊಂದಿವೆ. ಆದರೆ ಉಭಯ ತಂಡಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಸಮಸ್ಯೆಗಳನ್ನು ಮೆಟ್ಟಿ ಗೆಲುವು ಯಾರ ಮುಡಿಗೇರಲಿದೆ ಎಂಬುದು ಕಾದು ನೋಡಬೇಕಿದೆ.
ಭಾರತ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿದೆ. ಅದರಲ್ಲೂ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 0-3ರಿಂದ ವೈಟ್ ವಾಷ್ ಅನುಭವಿಸಿದ ಅಪಮಾನದಿಂದ ಕುಗ್ಗಿ ಹೋಗಿದೆ. ಅದರಲ್ಲೂ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಗಳು ತವರಿನಲ್ಲಿ ರನ್ ಗಳಿಸಲು ವಿಫಲರಾಗಿದ್ದು, ಇದೀಗ ಬೌನ್ಸಿ ಪಿಚ್ ಪರ್ತ್ ನಲ್ಲಿ ಹೇಗೆ ರನ್ ಗಳಿಸುತ್ತಾರೆ ಎಂಬ ಕುತೂಹಲ ಮನೆಮಾಡಿದೆ.
ಭಾರತ ತಂಡಕ್ಕೆ ಗಾಯದ ಸಮಸ್ಯೆ ಕೂಡ ಕಾಡುತ್ತಿದ್ದು, ಶುಭಮನ್ ಗಿಲ್ ಗಾಯಗೊಂಡು ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ. ಇದರಿಂದ ವೈಯಕ್ತಿಕ ಕಾರಣದಿಂದ ಭಾರತದಲ್ಲೇ ಉಳಿದಿದ್ದ ನಾಯಕ ರೋಹಿತ್ ಶರ್ಮ ತರಾತುರಿಯಲ್ಲಿ ಆಸ್ಟ್ರೇಲಿಯಾ ವಿಮಾನ ಏರಿದ್ದು, ಪರ್ತ್ ಟೆಸ್ಟ್ ಗೆ ತಂಡವನ್ನು ಸೇರಿಕೊಳ್ಳುವ ಭರವಸೆ ಮೂಡಿಸಿದ್ದಾರೆ.
ವಿರಾಟ್ ಕೊಹ್ಲಿ ರನ್ ಬರ ಎದುರಿಸುತ್ತಿರುವುದು ತಂಡದ ಚಿಂತೆ ಹೆಚ್ಚುವಂತೆ ಮಾಡಿದೆ. ಆದರೆ ಅಭ್ಯಾಸ ಪಂದ್ಯದಲ್ಲಿ ಫಾರ್ಮ್ ಗೆ ಮರಳಿದ ಸೂಚನೆ ನೀಡಿದ್ದರೂ ಟೆಸ್ಟ್ ನಲ್ಲಿ ಎಷ್ಟು ರನ್ ಗಳಿಸುತ್ತಾರೆ ಎಂಬ ಕುತೂಹಲ ಹೆಚ್ಚಿದೆ. ಮತ್ತೊಂದೆಡೆ ಕೆಎಲ್ ರಾಹುಲ್, ಸರ್ಫರಾಜ್ ಖಾನ್, ಯಶಸ್ವಿ ಜೈಸ್ವಾಲ್ ಮುಂತಾದ ಪ್ರಮುಖ ಬ್ಯಾಟ್ಸ್ ಮನ್ ಗಳು ಅಗ್ನಿ ಪರೀಕ್ಷೆಗೊಳಪಡಲಿದ್ದಾರೆ. ಜಸ್ ಪ್ರೀತ್ ಬುಮ್ರಾ ಬೌಲಿಂಗ್ ತಂಡವನ್ನು ಮುನ್ನಡೆಸಲಿದ್ದು, ಸ್ಪಿನ್ನರ್ ಅಶ್ವಿನ್ ಟ್ರಂಪ್ ಕಾರ್ಡ್ ಆಗುವ ಸಾಧ್ಯತೆ ಇದೆ.