ಹಾಲಿ ಚಾಂಪಿಯನ್ ಜೆಕ್ ಗಣರಾಜ್ಯದ ಮಾರ್ಕೆಟಾ ವೊಂಡ್ರೊಸೋವಾ ವಿಂಬಲ್ಡನ್ ಗ್ರ್ಯಾನ್ ಸ್ಲಾಮ್ ಟೂರ್ನಿಯ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ. ಈ ಮೂಲಕ 1994ರ ನಂತರ ಹಾಲಿ ಚಾಂಪಿಯನ್ ಟೂರ್ನಿಯ ಮೊದಲ ದಿನವೇ ಹೊರಬಿದ್ದ ಹಾಲಿ ಚಾಂಪಿಯನ್ ಎಂಬ ಕುಖ್ಯಾತಿಗೆ ಪಾತ್ರರಾದರು.
ಹಸಿರು ಅಂಕಣದಲ್ಲಿ ಮಂಗಳವಾರ ಆರಂಭಗೊಂಡ ವನಿತೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಮಾರ್ಕೆಟಾ ವೊಂಡ್ರೊಸೊವಾ 4-6, 2-6 ನೇರ ಸೆಟ್ ಗಳಿಂದ ಶ್ರೇಯಾಂಕಿತ ರಹಿತ ಆಟಗಾರ್ತಿ ಸ್ಪೇನ್ ನ ಜೆಸ್ಸಿಕಾ ಬೌಸಾಸ್ ಮನೆರಿಯೊ ವಿರುದ್ಧ ಆಘಾತ ಅನುಭವಿಸಿದರು.
1994ರಲ್ಲಿ ಹಾಲಿ ಚಾಂಪಿಯನ್ ಆಗಿದ್ದ ಸ್ಟೆಫಿ ಗ್ರಾಫ್ ಲೊರಿ ಮೆಕ್ ನೀಲ್ ವಿರುದ್ಧ ಸೋಲುಂಡಿದ್ದರು. ನಂತರ ಇದೇ ಮೊದಲ ಬಾರಿಗೆ ಮಾರ್ಕೆಟಾ ಮೊದಲ ಸುತ್ತಿನ ಪಂದ್ಯದಲ್ಲೇ ಸೋಲುಂಡ ಚಾಂಪಿಯನ್ ಎಂಬ ಬೇಡದ ದಾಖಲೆಗೆ ಪಾತ್ರರಾದರು.
ಕಳೆದ ಫ್ರೆಂಚ್ ಓಪನ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಮಾರ್ಕೆಟಾ ಮೊದಲ ಸೆಟ್ ನಲ್ಲಿ 28 ತಪ್ಪುಗಳನ್ನು ಮಾಡಿ ಫಾರ್ಮ್ ನಲ್ಲಿ ಇಲ್ಲ ಎಂಬುದರ ಸುಳಿವು ನೀಡಿದರು. ಪಂದ್ಯದಲ್ಲಿ ಒಟ್ಟಾರೆ 7 ಡಬಲ್ ಫಾಲ್ಟ್ ಮಾಡಿದರು. ಅಲ್ಲದೇ ಸರ್ವ್ ಮಾಡಲು 5 ಪ್ರಯತ್ನಗಳನ್ನು ಮಾಡಿ ಪಂದ್ಯ ಏಕಪಕ್ಷೀಯವಾಗುವಂತೆ ಮಾಡಿದರು.