ನಾಯಕಿ ಹರ್ಮನ್ ಪ್ರೀತ್ ಕೌರ್ ಹೋರಾಟದ ಅರ್ಧಶತಕದ ಹೊರತಾಗಿಯೂ ಭಾರತ ತಂಡ 9 ರನ್ ಗಳಿಂದ ಆಸ್ಟ್ರೇಲಿಯಾ ವಿರುದ್ಧ ಸೋಲುಂಡು ವನಿತೆಯರ ಟಿ-20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಹಾದಿ ದುರ್ಗಮವಾಗಿದೆ.
ಶಾರ್ಜಾದಲ್ಲಿ ಭಾನುವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 151 ರನ್ ಕಲೆ ಹಾಕಿತು. ಕಠಿಣ ಗುರಿ ಬೆಂಬತ್ತಿದ ಭಾರತ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 142 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತ ಗೆಲ್ಲಲು ಕೊನೆಯ ಓವರ್ ನಲ್ಲಿ 14 ರನ್ ಗಳಿಸಬೇಕಿತ್ತು. ಆದರೆ 4 ವಿಕೆಟ್ ಕಳೆದುಕೊಂಡು 2 ರನ್ ಮಾತ್ರ ಗಳಿಸುವ ಮೂಲಕ ಗೆಲುವಿನ ಹೊಸ್ತಿಲಲ್ಲಿ ಎಡವಿತು. ಅದರಲ್ಲೂ ಕೊನೆಯ 6 ಬ್ಯಾಟ್ಸ್ ಮನ್ ಗಳು ಒಂದಂಕಿಯ ಮೊತ್ತಕ್ಕೆ ಔಟಾದರು.
ಭಾರತ ತಂಡ ಸೆಮಿಫೈನಲ್ ತಲುಪಬೇಕಾದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಿತ್ತು. ಸೋತು ಟೂರ್ನಿಯಿಂದ ಹೊರಬಿದ್ದರೆ ಆಸ್ಟ್ರೇಲಿಯಾ ನಾಕೌಟ್ ಹಂತ ಪ್ರವೇಶಿಸಿತು. ನಾಯಕಿ ಹರ್ಮನ್ ಪ್ರೀತ್ ಕೌರ್ 47 ಎಸೆತಗಳಲ್ಲಿ 6 ಬೌಂಡರಿ ಸೇರಿದಂತೆ 54 ರನ್ ಬಾರಿಸಿ ಅಜೇಯರಾಗಿ ಉಳಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡದ ಪರ ಆರಂಭಿಕ ಆಟಗಾರ್ತಿ ಗ್ರೇಸ್ ಹ್ಯಾರಿಸ್ (40), ನಾಯಕಿ ಟಾಹಿಲಾ ಮೆಗ್ರಾಥ್ (32) ಮತ್ತು ಎಸ್ಲೆ ಪೆರ್ರಿ (32) ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು.