ಜಿಂಬಾಬ್ವೆ ತಂಡ 344 ರನ್ ಪೇರಿಸುವ ಮೂಲಕ ಟಿ-20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತದ ವಿಶ್ವದಾಖಲೆ ಬರೆದಿದೆ.
ನೈರೋಬಿಯಲ್ಲಿ ಬುಧವಾರ ನಡೆದ ಗಾಂಬಿಯಾ ವಿರುದ್ಧದ ಪಂದ್ಯದಲ್ಲಿ ಜಿಂಬಾಬ್ವೆ ತಂಡ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 344 ರನ್ ಪೇರಿಸಿ ಭಾರತದ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬದಲಿಸಿಕೊಂಡಿತು.
ಈ ಮೂಲಕ ಟೆಸ್ಟ್ ಆಡುವ ತಂಡಗಳಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ಜಿಂಬಾಬ್ವೆ ಪಾಲಾಯಿತು. ಭಾರತ ತಂಡ ಇತ್ತೀಚೆಗಷ್ಟೇ ನಡೆದ ಬಾಂಗ್ಲಾದೇಶ ವಿರುದ್ಧ 297 ರನ್ ಪೇರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಮಂಗೋಲಿಯಾ ವಿರುದ್ಧ ನೇಪಾಳ ತಂಡ 3 ವಿಕೆಟ್ ಗೆ 314 ರನ್ ಗಳಿಸಿ ದಾಖಲೆಯನ್ನು ಕೂಡ ಜಿಂಬಾಬ್ವೆ ಮುರಿಯಿತು.
ನಾಯಕ ಸಿಕಂದರ್ ರಾಜಾ 43 ಎಸೆತಗಳಲ್ಲಿ 7 ಬೌಂಡರಿ ಮತ್ತು 15 ಸಿಕ್ಸರ್ ಸೇರಿದಂತೆ 133 ರನ್ ಸಿಡಿಸಿ ಔಟಾಗದೇ ಉಳಿದರು. ಸಿಕಂದರ್ ರಾಜಾ 33 ಎಸೆತಗಳಲ್ಲಿ ಶತಕ ಪೂರೈಸಿ ನಮಿಬಿಯಾದ ಜಾನ್ ನಿಕೊಲ್ ಲೋಫ್ಟೆ ಇಟಾನ್ ಗಳಿಸಿದ ಎರಡನೇ ಅತೀ ವೇಗದ ಶತಕದ ದಾಖಲೆಯನ್ನು ಸರಿಗಟ್ಟಿದರು. ಸಹಿಲ್ ಚೌಹಾಣ್ 27 ಎಸೆತಗಳಲ್ಲಿ ಶತಕ ಗಳಿಸಿದ ದಾಖಲೆ ಹೊಂದಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ನಾಯಕ ಏರಾನ್ ಫಿಂಚ್ 175 ರನ್ ಬಾರಿಸಿರುವುದು ಅಂತಾರಾಷ್ಟ್ರೀಯ ಟಿ-20ಯಲ್ಲಿ ಆಟಗಾರನ ವೈಯಕ್ತಿಕ ಗರಿಷ್ಠ ಸಾಧನೆಯಾಗಿದೆ.
ಗಾಂಬಿಯಾ ತಂಡವನ್ನು 54 ರನ್ ಗೆ ಆಲೌಟ್ ಮಾಡಿದ ಜಿಂಬಾಬ್ವೆ ತಂಡ 290 ರನ್ ಗಳ ಅಂತರದಿಂದ ಜಯ ಸಾಧಿಸಿ ಟಿ-20ಯಲ್ಲಿ ರನ್ ಗಳ ಆಧಾರದಲ್ಲಿ ಎರಡನೇ ಅತೀ ದೊಡ್ಡ ಗೆಲುವಿನ ದಾಖಲೆ ಬರೆದಿದೆ.